ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಆರ್‌ಸಿಬಿ ತಂಡದ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಪಾಟಿದಾರ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಈ ಮಹತ್ವದ ನಿರ್ಧಾರದ ಬೆನ್ನಲ್ಲೇ ನೂತನ ನಾಯಕನಿಗೆ ಆರ್‌ಸಿಬಿ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.
ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಕೊಹ್ಲಿ, ಮೊದಲನೆಯದಾಗಿ, ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಮತ್ತು ನಿಮಗೆ ಶುಭ ಹಾರೈಸುತ್ತೇನೆ. ಕಳೆದ ಕೆಲ ವರ್ಷಗಳಿಂದ ನೀವು ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ಇದೀಗ ನಿಮಗೆ ನಾಯಕತ್ವ ಕೂಡ ಸಿಕ್ಕಿದೆ. ಇದಕ್ಕೆ ನೀವು ತುಂಬಾ ಅರ್ಹರಾಗಿದ್ದೀರಿ. ನಾನು ಮತ್ತು ಇತರ ತಂಡದ ಸದಸ್ಯರು ಸದಾ ನಿಮ್ಮ ಜೊತೆ ಇರಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಇದು ನಿಮಗೆ ಸಿಕ್ಕ ದೊಡ್ಡ ಗೌರವ. ನಿಜಕ್ಕೂ ಇದು ನನಗೆ ಸಂತೋಷಕರ ವಿಷಯ. ಏಕೆಂದರೆ ನೀವು ಆಟದ ಪ್ರತಿಯೊಂದು ಹಂತದಲ್ಲೂ ಸುಧಾರಿಸಿದ್ದೀರಿ. ಅಲ್ಲದೆ ರಾಜ್ಯ ತಂಡವನ್ನು ಮುನ್ನಡೆಸಿದ್ದೀರ. ಫ್ರಾಂಚೈಸಿ ತಂಡವನ್ನು ಮುನ್ನಡೆಸಲು ಏನು ಬೇಕು ಎಂಬುದನ್ನು ಅವರು ತೋರಿಸಿದ್ದೀರಿ.
ಆರ್‌ಸಿಬಿ ಅಭಿಮಾನಿಗಳು ರಜತ್ ಪಾಟಿದಾರ್ ಅವರಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮವಾದದ್ದನ್ನು ಮಾಡಲಿದ್ದಾರೆ. ಹೀಗಾಗಿ ನಿಮ್ಮೆಲ್ಲರ ಬೆಂಬಲ ರಜತ್ ಪಾಟಿದಾರ್ ಮೇಲಿರಲಿ ಎಂದು ವಿರಾಟ್ ಕೊಹ್ಲಿ ಕೇಳಿಕೊಂಡಿದ್ದಾರೆ.