ಹೈದರಾಬಾದ್‌ನಲ್ಲಿ ಹವಾಲಾ ದಂಧೆ ಭೇದಿಸಿದ ಪೊಲೀಸರು: 1.27 ಕೋಟಿ ರೂ. ವಶ, ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೈದರಾಬಾದ್‌ ಪೋಲೀಸರು ಬಹುದೊಡ್ಡ ಹವಾಲಾ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1.27 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ನಾರಾಯಣಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮೂವರೂ ಹೈದರಾಬಾದ್‌ಗೆ ಸೇರಿದವರು. ಅವರನ್ನು ಮನ್ನೆ ಶ್ರೀನಿವಾಸ್ (53), ವಿಶ್ವನಾಥ್ ಚೆಟ್ಟಿ (45) ಮತ್ತು ಕೆ ಫಣಿಕುಮಾರ್ ರಾಜು (42) ಎಂದು ಗುರುತಿಸಲಾಗಿದೆ.

ಕಮಿಷನರ್ ಕಾರ್ಯಪಡೆ, ಕೇಂದ್ರ ವಲಯ ತಂಡದ ಸಬ್ ಇನ್ಸ್‌ಪೆಕ್ಟರ್ ಸಾಯಿ ಕಿರಣ್ ಮತ್ತು ಅವರ ತಂಡವು ಗೌಪ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡು ಅಪರಾಧಿಗಳನ್ನು ಬಂಧಿಸಿದೆ. ಹಿಮಾಯತ್ ನಗರದ ಲಿಬರ್ಟಿ ಎಕ್ಸ್ ರಸ್ತೆಯ ರೇಮಂಡ್ ಶೋರೂಂ ಎದುರು ಬಿಳಿ ಬಣ್ಣದ ಹೋಂಡಾ ಆಕ್ಟಿವಾವನ್ನು ನಿಲ್ಲಿಸಿದ ತಂಡವು ವಾಹನದ ಸವಾರನನ್ನು ಬಂಧಿಸಿದೆ. ವಿಚಾರಣೆ ನಡೆಸಿದಾಗ ಆತ ಕೆ ಫಣಿಕುಮಾರ್ ರಾಜು ಎಂದು ಗುರುತಿಸಿಕೊಂಡಿದ್ದಾನೆ. ಅಧಿಕಾರಿಗಳು ವಾಹನವನ್ನು ಪರಿಶೀಲಿಸಿದಾಗ ಲೆಕ್ಕಕ್ಕೆ ಸಿಗದ 1.27 ಕೋಟಿ ರೂ. ದೊರಕಿದೆ.

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಆರೋಪಿ ಮನ್ನೆ ಶ್ರೀನಿವಾಸ್ ಬಳಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡಿದ್ದು, ಮನ್ನೆ ಶ್ರೀನಿವಾಸ್ ಎಂಬುವವರಿಂದ 70 ಲಕ್ಷ ಹಾಗೂ ಉಳಿದ 57 ಲಕ್ಷ ರೂ.ಗಳನ್ನು ಮತ್ತೊಬ್ಬ ವ್ಯಕ್ತಿ ಸಿ ವಿಶ್ವನಾಥ್ ಚೆಟ್ಟಿಯಿಂದ ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದರ ಆಧಾರದ ಮೇಲೆ ಅಧಿಕಾರಿಗಳು ಮನ್ನೆ ಶ್ರೀನಿವಾಸ್ ಮತ್ತು ವಿಶ್ವನಾಥ್ ಚೆಟ್ಟಿಯನ್ನು ಬಂಧಿಸಿದ್ದು ಅವರು ಹಣದ ಲೆಕ್ಕವನ್ನು ನೀಡಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡವು ಅವರನ್ನು ಹಾಗೂ ನಗದನ್ನು ಮುಂದಿನ ಕ್ರಮಕ್ಕಾಗಿ ನಾರಾಯಣಗುಡ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಹಸ್ತಾಂತರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!