ರಸ್ತೆ ತುಂಬೆಲ್ಲಾ ಗುಂಡಿ, ಧೂಳು: ದುರಸ್ತಿ ಮಾಡದೆ ಕೈಕಟ್ಟಿ ಕುಳಿತ ಜನಪ್ರತಿನಿಧಿಗಳು!

ಹೊಸದಿಗಂತ ವರದಿ ಕೊಪ್ಪಳ:

ದಾರಿ ಕಾಣದಾಗಿದೆ ರಾಘವೇಂದ್ರನೇ… ಹಾಡಿನ ಸಾಲಿನಂತೆ ಕೊಪ್ಪಳದ ರಸ್ತೆಗಳಲ್ಲಿ ದಾರಿ ಕಾಣದಂತೆ ಆಗಿದೆ. ಮೂಲಭೂತ ಸೌಕರ್ಯಗಳಲ್ಲಿ ಅತಿ ಪ್ರಮುಖ್ಯವಾದದ್ದು ರಸ್ತೆ. ಆದರೆ, ನಗರದ ರಸ್ತೆಗಳಲ್ಲಿ ಡಾಂಬಾರು ಇಲ್ಲದೆ ಬರೀ ಧೂಳು, ಮಣ್ಣು ಏಳುತ್ತಿದೆ.  ಮೊಣಕಾಲುದ್ದ ತಗ್ಗು ಗುಂಡಿಗಳು ಬಿದ್ದಿವೆ. ಆದರೆ, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಆಸಕ್ತಿ ತೋರದೇ ಅದೇ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಬಂಡತನ ಪ್ರದರ್ಶಿಸುತ್ತಿದ್ದಾರೆ.

ಹರ್ಡೇಕರ್ ಮಂಜಪ್ಪ ವೃತ್ತದಿಂದ ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಸಕರೂ ಸೇರಿದಂತೆ ವಾಡ್೯ ಸದಸ್ಯರುಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ, ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುಷ್ಟಗಿ ರಸ್ತೆ ಮಾರ್ಗದಲ್ಲಿ ಹರ್ಡೆಕರ್ ಮಂಜಪ್ಪ ವೃತ್ತ ಬರಲಿದ್ದು, ಈ ವೃತ್ತದಿಂದ ಭಾಗ್ಯನಗರಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಕುಷ್ಟಗಿ ರಸ್ತೆಯ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ಮನೆಗಳಿಗೆ ಹಾಗೂ ಕುಷ್ಟಗಿ ಗೆ ಹೋಗಬೇಕಾದರೆ ಹರ್ಡೇಕರ್ ಮಂಜಪ್ಪ ವೃತ್ತದ ರಸ್ತೆಯೊಂದೇ ಮಾರ್ಗ ವಾಗಿದೆ‌. ಆದರೆ, ಈ ಮಾರ್ಗದ ಡಾಂಬಾರು ಕಿತ್ತು ಬಂದಿದ್ದು, ಬಿಂಜೆ, ಮಣ್ಣಿನಿಂದ ಕೂಡಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಧೂಳು ಆವರಿಸಲಿದ್ದು, ವಾಹನ ಸವಾರರು ಸಂಚರಿಸಲು ಪರದಾಡಬೇಕಿದೆ.

ಇನ್ನೂ ಈ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ಮಳೆ ಬಂದರೆ ಸಾಕು ವಾಹನಗಳು ಕೆಸರಲ್ಲಿ ಸಿಕ್ಕಿಕೊಳ್ಳಲಿವೆ. ಈ ರಸ್ತೆಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್, ಲಾರಿಗಳು, ಗೂಡ್ಸ್ ಗಾಡಿಗಳು, ಆಟೋ ಸೇರಿ ಎಲ್ಲ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಂಡತನದೊಂದಿಗೆ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೂರ್ನಾಲ್ಕು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಲಿದೆ. ಆಗ ಅಭಿವೃದ್ಧಿ ಕೆಲಸಗಳಿಗೆ ಕಡಿವಾಣ ಬೀಳಲಿದೆ. ಆದ್ದರಿಂದ ಮಾಚ್೯ ನೊಳಗೆ ರಸ್ತೆ ದುರಸ್ತಿ ಪಡಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!