April 28, 2026
Tuesday, April 28, 2026
spot_img

ದಾಂಪತ್ಯ ಕಲಹಕ್ಕೆ ಪೊಲೀಸ್ ಪೇದೆ ಬಲಿ: ವಸತಿಗೃಹದಲ್ಲಿ ನೇಣಿಗೆ ಶರಣು

ಹೊಸದಿಗಂತ ಮಂಡ್ಯ:

ದಾಂಪತ್ಯ ಕಲಹದಿಂದ ಮನನೊಂದ ಪೊಲೀಸ್ ಪೇದೆಯೊಬ್ಬರು ಮದ್ದೂರು ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಮದ್ದೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ. ರಮೇಶ್ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೂಲತಃ ಚಿಕ್ಕಬಳ್ಳಾಪುರದ ದಬಳಗೆರೆ ಗ್ರಾಮದವರಾದ ರಮೇಶ್, ಮದ್ದೂರಿನ ತಾಲೂಕು ಕಚೇರಿ ಸಮೀಪವಿರುವ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಬೆಸಗರಹಳ್ಳಿ ಠಾಣೆಯಿಂದ ಮದ್ದೂರು ಠಾಣೆಗೆ ವರ್ಗಾವಣೆಯಾಗಿದ್ದ ಇವರು, ನ್ಯಾಯಾಲಯದ ವಾರೆಂಟ್ ಹಾಗೂ ಸಮನ್ಸ್ ಜಾರಿ ಮಾಡುವ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ರಮೇಶ್, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೊಠಡಿಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಪುಷ್ಪಲತಾ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಅಗಲಿದ್ದಾರೆ.

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮದ್ದೂರು ಪೊಲೀಸ್ ಠಾಣೆಯ ಮುಂದೆ ಇರಿಸಲಾಗಿತ್ತು. ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತರ ಹುಟ್ಟೂರಾದ ದಬಳಗೆರೆ ಗ್ರಾಮಕ್ಕೆ ಶವವನ್ನು ಕೊಂಡೊಯ್ದು, ಸಶಸ್ತ್ರ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನ್ಯಾಯಾಲಯದ ಕೆಲಸಗಳಲ್ಲಿ ಸಕ್ರಿಯರಾಗಿದ್ದ ರಮೇಶ್ ಅವರ ನಿಧನಕ್ಕೆ ಮದ್ದೂರು ಪಟ್ಟಣದ ವಕೀಲರು ತೀವ್ರ ಸಂತಾಪ ಸೂಚಿಸಿದ್ದಾರೆ. ಗೌರವಾರ್ಥವಾಗಿ ಬುಧವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿಯುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !