Tuesday, March 28, 2023

Latest Posts

ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ಪೊಲೀಸರಿಂದ ನೊಟೀಸ್‌, ಅಂಥದ್ದೇನಿದೆ ಹಾಡಿನಲ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಡಿಯೋ ಮೂಲಕ ಸಾರ್ವಜನಿಕರ ನಡುವೆ ದ್ವೇಷವನ್ನು ಹುಟ್ಟುಹಾಕಿದ ಆರೋಪದ ಮೇಲೆ ‘ಯುಪಿ ಮೇ ಕಾ ಬಾ’ ಖ್ಯಾತಿಯ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ನೀಡಿದ್ದಾರೆ. ಆಕೆಯ ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ‘ಯುಪಿ ಮೇ ಕಾ ಬಾ- ಸೀಸನ್ 2’ ವೀಡಿಯೊಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ.

ಕಾನ್ಪುರ ಪೊಲೀಸರ ತಂಡ ಮಂಗಳವಾರ ರಾತ್ರಿ ಕಾನ್ಪುರ (ಗ್ರಾಮೀಣ) ನಲ್ಲಿರುವ ನೇಹಾ ಸಿಂಗ್ ಅವರ ನಿವಾಸವನ್ನು ತಲುಪಿ ಅಪರಾಧ ಪ್ರಕ್ರಿಯೆ ಸಂಹಿತೆಯ (CrPC) ಸೆಕ್ಷನ್ 160 ಅಡಿಯಲ್ಲಿ ನೋಟಿಸ್ ನೀಡಿದೆ. ನೋಟಿಸ್‌ನಲ್ಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆಕೆಯ ವಿಡಿಯೋ ಕುರಿತು ಸರಣಿ ಅಂಶಗಳ ವಿವರಗಳನ್ನು ಕೋರಿದ್ದಾರೆ.

ವಿಡಿಯೋದಲ್ಲಿ ಇರುವುದು ಆಕೆಯೇ, ಹೌದು ಎಂದಾದರೆ ಆಕೆಯಿಂದಲೇ ವಿಡಿಯೋ ಅಪ್‌ಲೋಡ್ ಆಗಿದೆಯೇ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ವೀಡಿಯೋ ಹಂಚಿಕೊಂಡಿರುವ ಯೂಟ್ಯೂಬ್ ಚಾನೆಲ್ ಮತ್ತು ಟ್ವಿಟರ್ ಖಾತೆ ಆಕೆಗೆ ಸೇರಿದೆಯೇ ಅಥವಾ ಇಲ್ಲವೇ ಎಂದು ಪೊಲೀಸರು ಮಾಹಿತಿ ಪಡೆದಿದ್ದಾರೆ. ಹಾಡಿನ ಸಾಹಿತ್ಯವನ್ನು ಬರೆದಿದ್ಯಾರು ಇತ್ಯಾದಿ ಮೂಲಗಳಿಂದ ಪೊಲೀಸರು ತನಿಖೆ ನಡೆಸಿದ್ದಾರೆ.
ಈ ವಿಡಿಯೋ ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಆಕೆಗೆ ಅರಿವಿದೆಯೇ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

ಯುಪಿ ಪೊಲೀಸರು ಮೂರು ದಿನಗಳೊಳಗೆ ನೋಟಿಸ್ ಮೂಲಕ ಆಕೆಯಿಂದ ವಿವರಣೆಯನ್ನು ಕೇಳಿದ್ದಾರೆ, ಸ್ಪಷ್ಟನೆ ನೀಡದಿದ್ದರೆ ಆಕೆಯ ವಿರುದ್ಧ ಐಪಿಸಿ ಮತ್ತು ಸಿಆರ್‌ಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಪ್ರಕರಣವನ್ನು ದಾಖಲಿಸಬಹುದು.
“ಈ ಹಾಡು ಸಮಾಜದಲ್ಲಿ ದ್ವೇಷ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಮತ್ತು ಈ ವಿಷಯದ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಲು ನೀವು ಕಾನೂನುಬದ್ಧವಾಗಿ ಬದ್ಧರಾಗಿದ್ದೀರಿ. ಆದ್ದರಿಂದ, ನೋಟಿಸ್ ಸ್ವೀಕರಿಸಿದ ಮೂರು ದಿನಗಳಲ್ಲಿ ನಿಮ್ಮ ಉತ್ತರವನ್ನು ಸಲ್ಲಿಸಬೇಕು” ಎಂದು ಯುಪಿ ಪೊಲೀಸರ ನೋಟಿಸ್ ಉಲ್ಲೇಖಿಸಿದೆ.

“ಒಂದು ವೇಳೆ ನಿಮ್ಮ ಉತ್ತರವು ತೃಪ್ತಿಕರವಾಗಿಲ್ಲದಿದ್ದರೆ, IPC ಮತ್ತು CRPC ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ ಮತ್ತು ಸರಿಯಾದ ಕಾನೂನು ತನಿಖೆಯನ್ನು ಕೈಗೊಳ್ಳಲಾಗುತ್ತದೆ” ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!