ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ ಪರೀಕ್ಷೆಯ ಅಭ್ಯರ್ಥಿಯೊಬ್ಬರು ಕೇಂದ್ರಕ್ಕೆ ತಡವಾಗಿ ಬಂದು ಪರೀಕ್ಷೆ ಮಿಸ್ ಆಗಿತ್ತು. ಇದಕ್ಕೆ ಬೆಂಗಳೂರಿನ ಟ್ರಾಫಿಕ್ ಕಾರಣ ಎಂದು ಯುವತಿ ಆರೋಪಿಸಿದ್ದಳು. ಆದರೆ ಇದರ ಸತ್ಯಾಸತ್ಯತೆಯನ್ನು ಬೆಂಗಳೂರು ನಗರ ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮ ಉಂಟಾದ ಟ್ರಾಫಿಕ್ ಜಾಮ್‌ನಿಂದ ಅಭ್ಯರ್ಥಿ ತಡವಾಗಿದ್ದಾರೆ ಎಂಬ ಆರೋಪವನ್ನು ಪೊಲೀಸರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಪರೀಕ್ಷಾ ಕೇಂದ್ರದ ಪ್ರವೇಶದ ಕೊನೆಯ ಸಮಯಕ್ಕೆ ಕೇವಲ 33 ನಿಮಿಷಗಳು ಬಾಕಿ ಇರುವಾಗಷ್ಟೇ ಅಭ್ಯರ್ಥಿ ಮನೆಯಿಂದ ಹೊರಟ್ಟಿರುವುದು ಧೃಡಪಟ್ಟಿದೆ. ಕಡಿಮೆ ಸಮಯದಲ್ಲಿ ತಲುಪಬಹುದಾದ ಸುಲಭ ಹಾಗೂ ಹತ್ತಿರದ ರಸ್ತೆಗಳು ಲಭ್ಯವಿದ್ದರೂ ಸಹ, ಅಭ್ಯರ್ಥಿಯು ಹೆಚ್ಚು ಸಮಯ ತೆಗೆದುಕೊಳ್ಳುವ ಸುದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಅಂದು ರಸ್ತೆಗಳಲ್ಲಿ ಟ್ರಾಫಿಕ್ ಪರಿಸ್ಥಿತಿ ಸಾಮಾನ್ಯವಾಗಿತ್ತು. ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಿಂದಾಗಿ ಯಾವುದೇ ರೀತಿಯ ಅಸಹಜ ಸಂಚಾರ ದಟ್ಟಣೆ ಉಂಟಾಗಿರಲಿಲ್ಲ. ಅಭ್ಯರ್ಥಿ ಚಲಿಸುತ್ತಿದ್ದ ಮಾರ್ಗದಲ್ಲಿ ನಿಯೋಜನೆಗೊಂಡಿದ್ದ ಸಂಚಾರ ಪೊಲೀಸ್ ಸಿಬ್ಬಂದಿಗಳು, ಅಭ್ಯರ್ಥಿಯ ವಾಹನವು ಸುಲಭವಾಗಿ ಸಾಗಲು ಅಗತ್ಯವಿದ್ದ ಕಡೆಗಳಲ್ಲೆಲ್ಲಾ ನೆರವು ನೀಡಿರುವುದು ಕಂಡುಬಂದಿದೆ.



