ಹೊಸದಿಗಂತ ವರದಿ,ಹಾವೇರಿ (ಶಿಗ್ಗಾವಿ):
ಪ್ರತಿ ಬಾರಿಯೂ ಚುನಾವಣೆಯ ಮುಂಚೆ ಮಹಿಳೆಯರ ಅಕೌಂಟ್‌ಗೆ ಗೃಹಲಕ್ಷ್ಮೀ ಯೋಜನೆಯ ೨ಸಾವಿರ ರೂಪಾಯಿಯನ್ನು ಹಾಕುವುದು ನೀತಿ ಸಂಹಿತೆಯ ವಿರುದ್ದವಾಗಿದೆ. ಚುನಾವಣಾ ಆಯೋಗ ತಕ್ಷಣ ತಡೆ ಹಿಡಿಯಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಚುನಾವಣೆ ಪಾರದರ್ಶಕವಾಗಿರಬೇಕು. ರಾಜ್ಯ ಸರ್ಕಾರ ಪ್ರತಿ ಬಾರಿಯೂ ಚುನಾವಣೆಗೆ ಮುನ್ನ ಸರ್ಕಾರದ ಹಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಹಾವೇರಿ ಜಿಲ್ಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆಗೆ ಸರ್ಕಾರದ ಹಣ ಬಳಕೆ ಆಗುತ್ತಿರುವುದು ಸ್ಪಷ್ಟ. ಸಿಎಂ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವ, ಸಂವಿಧಾನದ ಬಹಳ ಬಗ್ಗೆ ಮಾತನಾಡುತ್ತಾರೆ. ಇಡೀ ಸರ್ಕಾರವೇ ಸರ್ಕಾರಿ ದುಡ್ಡಿನಲ್ಲಿ ರಾಜಕೀಯ ಭ್ರಷ್ಟಾಚಾರ ಮಾಡುತ್ತಿದೆ. ಶಿಗ್ಗಾವಿ ಸವಣೂರು ಕ್ಷೇತ್ರದ ಜನರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನಿರಂತರವಾಗಿ ನಡೆಯುತ್ತಿರುವ ಈ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿ ಎಲ್ಲ ವರ್ಗದ ಜನರು ಈಗಾಗಲೇ ಏನು ತೀರ್ಮಾನ ಮಾಡಿದ್ದಿರಿ, ಅದನ್ನು ಯಾವುದೇ ಕಾರಣಕ್ಕೂ ಬದಲಾಯಿಸದೇ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.