ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ಏಳು ರಾಜ್ಯಸಭಾ ಸಂಸದರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಪಂಜಾಬ್‌ನಲ್ಲಿ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ. ಇದರ ಪರಿಣಾಮವಾಗಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಿಗೆ ನೀಡಲಾಗಿದ್ದ Z+ ಶ್ರೇಣಿಯ ಭದ್ರತೆಯನ್ನು ಪಂಜಾಬ್‌ನ ಎಎಪಿ ಸರ್ಕಾರ ಶನಿವಾರ ಅಧಿಕೃತವಾಗಿ ಹಿಂತೆಗೆದುಕೊಂಡಿದೆ.
ಇತ್ತೀಚೆಗೆ ರಾಘವ್ ಚಡ್ಡಾ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಎಎಪಿಯ ಏಳು ಸಂಸದರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಘೋಷಿಸಿದ್ದರು. ಈ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅವರ ಹೆಸರೂ ಇತ್ತು. ಈ ರಾಜಕೀಯ ಬದಲಾವಣೆಯು ಪಂಜಾಬ್ ಸರ್ಕಾರ ಮತ್ತು ಸಂಸದರ ನಡುವಿನ ಸಂಬಂಧ ಹಳಸುವಂತೆ ಮಾಡಿದೆ.
ಹರ್ಭಜನ್ ಸಿಂಗ್ ಅವರ ಭದ್ರತೆಗಾಗಿ ಜಲಂಧರ್‌ನ ‘ಛೋಟ್ಟಿ ಬರಾದರಿ’ ಪ್ರದೇಶದ ನಿವಾಸದಲ್ಲಿ ನಿಯೋಜಿಸಲಾಗಿದ್ದ ಸುಮಾರು 10 ಪಂಜಾಬ್ ಪೊಲೀಸ್ ಸಿಬ್ಬಂದಿ ಹಾಗೂ ಬೆಂಗಾವಲು ವಾಹನಗಳನ್ನು ಸರ್ಕಾರ ಮರಳಿ ಪಡೆದಿದೆ. ಅಷ್ಟೇ ಅಲ್ಲದೆ, ಅವರ ನಿವಾಸದ ಹೊರಗಿದ್ದ ಪೈಲಟ್ ವಾಹನ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ಶನಿವಾರವೇ ತೆರವುಗೊಳಿಸಲಾಗಿದೆ.
ರಾಜ್ಯ ಸರ್ಕಾರ ಭದ್ರತೆ ಹಿಂಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಹರ್ಭಜನ್ ಸಿಂಗ್ ಅವರಿಗೆ ರಕ್ಷಣೆ ನೀಡಲು ಮುಂದಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ಅವರ ಜಲಂಧರ್ ನಿವಾಸದ ಸುತ್ತಲೂ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮದ ನಡುವೆಯೂ ಸಂಸದರಿಗೆ ಕೇಂದ್ರ ಮಟ್ಟದಲ್ಲಿ ಭದ್ರತೆ ಮುಂದುವರಿಯಲಿದೆ.
ಈ ಬೆಳವಣಿಗೆಯು ಪಂಜಾಬ್‌ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಕೇಂದ್ರದ ಬಿಜೆಪಿ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಲಕ್ಷಣಗಳು ಕಾಣುತ್ತಿವೆ.



