ಹೊಸದಿಗಂತ ವರದಿ,ಮೈಸೂರು:
ಬರುವ ಮಾರ್ಚ್ ೧೭ ರಂದು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “೨೦೨೪ರ ಮಾರ್ಚ್ ೧೭ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು ೫೦ ವರ್ಷವಾಗುತ್ತದೆ. ಆ ದಿನ ಬೃಹತ್ ಕಾರ್ಯಕ್ರಮ ಮಾಡಿ, ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನಂತರ ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಮತ್ತು ಯಾವ ಪಕ್ಷಕ್ಕೂ ಸಲಹೆ ಸೂಚನೆ ನೀಡುವುದಿಲ್ಲ. ಎಲ್ಲ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿರುವೆ ಎಂದು ಹೇಳಿದರು.
ಬಿಜೆಪಿ ಹೈಕಮಾಂಡ್ ಕೊನೆಗೂ ಗಜ ಪ್ರಸವ ಮಾಡಿ ಪಕ್ಷದ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಅದೇ ರೀತಿ ಪ್ರತಿಪಕ್ಷನ ಸ್ಥಾನಕ್ಕೆ ಸೂಕ್ತರನ್ನು ಆಯ್ಕೆ ಮಾಡುವ ಮೂಲಕ ಗಜ ಮೋಕ್ಷ ಮಾಡಲಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಿರುಸಿನಿಂದ ಓಡಾಡುತ್ತಿವೆ. ಅದನ್ನು ತಡೆದು ಪಕ್ಷ ಸಂಘಟನೆ ಮಾಡಬೇಕಾಗಿದೆ. ಇಲ್ಲಿ ಕುಟುಂಬ ರಾಜಕೀಯದ ಪ್ರಶ್ನೆ ಬರುವುದಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು ಕುಟುಂಬ ರಾಜಕಾರಣ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ರಾಜಕಾರಣ ಮಾಡುತ್ತಾರೆ. ಆದರೆ ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ ಎಂದು ಕಿವಿ ಮಾತು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರರನ್ನು ನೇಮಕ ಮಾಡಿರುವುದು ಬರುವ ಲೋಕಸಭೆ ಚುನಾವಣೆಗೆ ಅನುಕೂಲ ಆಗುತ್ತದೆ ಎಂದು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.