ಹೊಸದಿಗಂತ ವರದಿ, ಶಿವಮೊಗ್ಗ :
ತುಂಗಭದ್ರಾ ನದಿ ವ್ಯಾಪಕವಾಗಿ ಮಲಿನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನದಿ ಉಗಮ ಸ್ಥಾನದಿಂದ ಹೊಸಪೇಟೆವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಲು ನಿರ್ಮಲ ತುಂಗಭದ್ರಾ ಅಭಿಯಾನ ಸಿದ್ಧತೆ ನಡೆಸಿದೆ.
ಬರುವ ನವೆಂಬರ್ ಮೊದಲ ವಾರದಿಂದ ಆರಂಭಿಸಿ ಒಟ್ಟು ಮೂರು ವಾರಗಳ ಕಾಲ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ತುಂಗಭದ್ರಾ ನದಿಯ ಉಗಮ ಸ್ಥಾನವಾದ ಶೃಂಗೇರಿ ಬಳಿಯಿಂದ ಆರಂಭಿಸಿ, ಹೊಸಪೇಟೆ ಬಳಿಯ ಕಿಷ್ಕಿಂದೆವರೆಗೆ ಸಂಪೂರ್ಣ ನದಿ ದಂಡೆಯುದ್ದಕ್ಕೂ ಪಾದಯಾತ್ರೆ ನಡೆಸಲು ಯೋಜಿಸಲಾಗಿದೆ.
ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಕುರಿತು ಪೂರ್ವಭಾವಿ ಸಭೆ ನಗರದ ಶ್ರೀಮಾತಾ ಮಂದಿರದಲ್ಲಿ ಮಂಗಳವಾರ ಸಂಜೆ ನಡೆಯಿತು.
ಪ್ರೊ.ಶ್ರೀಪತಿ ಮಾತನಾಡಿ, ನಮ್ಮ ಉಳಿವಿಗಾಗಿ ಈ ಅಭಿಯಾನ ಮಾಡಬೇಕಿದೆ. ನಮನ್ನು ನಾವು ಎಚ್ಚರಿಸಲು ಈ ಅಭಿಯಾನ ಎಂದರು.
ಪರಿಸರ ತಜ್ನ ಪ್ರೊ.ಬಿ.ಎಮ್. ಕುಮಾರಸ್ವಾಮಿ ಮಾತನಾಡಿ, ಅಭಿಯಾನ ಶೃಂಗೇರಿಯಿಂದ ಪ್ರಾರಂಭವಾಗಲಿದೆ. ನದಿ ದಂಡೆಯಲ್ಲಿ ಸಿಗುವ ಮೊದಲ ಜನವಸತಿ ಪಟ್ಟಣ ಶೃಂಗೇರಿ. ಕನಿಷ್ಠ ಒಂದು ಕೋಟಿ ಯಾತ್ರಾರ್ಥಿಗಳು ಇಲ್ಲಿಗೆ ಪ್ರತಿ ವರ್ಷ ಭೇಟಿ ಕೊಡುತ್ತಾರೆ. ಅವರ ಮಲಮೂತ್ರ ನದಿ ಪಾಲು ಆಗುತ್ತಿದೆ. ಅಲ್ಲಿ ದೊಡ್ಡ ಶುದ್ಧೀಕರಣ ಘಟಕ ಆಗಬೇಕು. ನದಿಯಲ್ಲಿ ಎಲ್ಲರೂ ಹೊಲಸನ್ನು ಆಗಿದ್ದೇವೆ ಎಂದರು.
ಹಾವೇರಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಕುಲಕರ್ಣಿ ಮಾತನಾಡಿ, ಪಾದಯಾತ್ರೆ ಯಾವ ದಂಡೆ ಮೂಲಕ ಅನ್ನುವುದು ತಿಳಿಸಬೇಕಿದೆ ಎಂದರು.
ಚನ್ನಗಿರಿಯ ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ನಾವು ನಾಶದ ಕಡೆ ಸಾಗಿದ್ದೇವೆ. ಆದರೂ ಆಶಾಭಾವನೆ ಇರಬೇಕು. ಪಾದಯಾತ್ರೆಗೆ ಸಂಪೂರ್ಣ ಬೆಂಬಲ ಕೊಡುತ್ತೇನೆ. ತಕ್ಷಣ 10,000 ರೂ. ನೀಡುತ್ತೇನೆ ಎಂದು ಪ್ರಕಟಿಸಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಂಯೋಜಕ ಬಸವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ.ತೇಜಸ್ವಿ, ಡಾ.ಶ್ರೀಧರ್, ಎಸ್.ಪಿ.ಶೇಷಾದ್ರಿ, ಶರಣ್ಯ ಮಂಜುನಾಥ್, ನವೀನ್ ದಳವಾಯಿ ಇನ್ನಿತರರು ಇದ್ದರು. ತ್ಯಾಗರಾಜ ಮಿತ್ಯಾಂತ ಸ್ವಾಗತಿಸಿ, ಎಂ.ಶಂಕರ್ ಪ್ರಾಸ್ತಾವಿಕ, ಕಿರಣ್ ಕುಮಾರ್ ವಂದಿಸಿದರು.ವಿನಯ್ ನಿರೂಪಿಸಿದರು.