ಉತ್ತರ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ಉಗ್ರರ ಡ್ರೋನ್‌ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಇಸ್ರೇಲ್‌ಗೆ ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸರಣಿ ದಾಳಿ ನಡೆಸಿದೆ.

ಉತ್ತರ ಇಸ್ರೇಲ್‌ನ ಎಕ್ರೆ ಬಳಿಯ ಎರಡು ಮಿಲಿಟರಿ ತಾಣಗಳಲ್ಲಿ ಸರಣಿ ಡ್ರೋನ್‌ ದಾಳಿ ಗಳನ್ನು ಮಾಡಲಾಗಿದೆ. ಇನ್ನೊಂದು ಸ್ಥಳದಲ್ಲಿ ಇಸ್ರೇಲಿ ಮಿಲಿಟರಿ ವಾಹನದ ಮೇಲೆ ದಾಳಿ ಮಾಡಿದೆ ಎಂದು ಹಿಜ್ಬುಲ್ಲಾ ಮಾಹಿತಿ ನೀಡಿದೆ.

ಆದರೆ, ಇದು ಕಳೆದ ವಾರ ಇಸ್ರೇಲ್‌ ತನ್ನ ಕಮಾಂಡರ್‌ ಫುವಾದ್‌ ಶುಕ್ರ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರವಲ್ಲ ಎಂದು ತಿಳಿಸಿದೆ. ಶುಕ್ರ್‌ನನ್ನು ಕೊಂದಿದ್ದಕ್ಕೆ ಭೀಕರ ಪ್ರತೀಕಾರ ಇನ್ನಷ್ಟೇ ಬರಲಿದೆ ಎಂದು ಎಚ್ಚರಿಕೆ ನೀಡಿದೆ.

ಸಾಕಷ್ಟು ಡ್ರೋನ್‌ಗಳು ಗಡಿ ದಾಟುತ್ತಿರುವುದನ್ನು ನಾವು ಗಮನಿಸಿದ್ದೇವೆ. ಲೆಬನಾನ್‌ನಿಂದ ಈ ಡ್ರೋನ್‌ಗಳು ಬರುತ್ತಿದ್ದು, ಒಂದನ್ನು ಇಂಟರ್‌ಸೆಪ್ಟ್‌ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ಕರಾವಳಿ ನಗರವಾದ ನಹರಿಯಾದ ದಕ್ಷಿಣದಲ್ಲಿ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ರಾಯಿಟರ್ಸ್ ಟಿವಿ ಫೂಟೇಜ್ ನಗರದ ಹೊರಗಿನ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಬಳಿ ಒಂದು ದಾಳಿಯ ಇಂಪ್ಯಾಕ್ಟ್‌ ಸೈಟ್ ಅನ್ನು ತೋರಿಸಿದೆ.

ಇಸ್ರೇಲಿ ಮಿಲಿಟರಿ ಎಕ್ರೆ ಪ್ರದೇಶದ ಸುತ್ತಲೂ ಸೈರನ್‌ಗಳನ್ನು ಮೊದಲು ಮೊಳಗಿಸಿತ್ತು. ಬಳಿಕ ಇದು ಸುಳ್ಳು ಅಲಾರಾಂಗಳು ಎನ್ನಲಾಗಿತ್ತು. ದಕ್ಷಿಣ ಲೆಬನಾನ್‌ನ ಎರಡು ಹಿಜ್ಬುಲ್ಲಾ ಟಾರ್ಗೆಟ್‌ನ ಮೇಲೆ ಇಸ್ರೇಲ್‌ನ ಏರ್‌ಫೋರ್ಸ್‌ ದಾಳಿ ನಡೆಸಿದ್ದಾಗಿ ತಿಳಿಸಿದೆ.

ಮಂಗಳವಾರ ಮುಂಜಾನೆ, ಗಡಿಯಿಂದ ಉತ್ತರಕ್ಕೆ ಸುಮಾರು 30 ಕಿಮೀ (19 ಮೈಲಿ) ದೂರದಲ್ಲಿರುವ ಲೆಬನಾನಿನ ಪಟ್ಟಣವಾದ ಮೇಫಡೌನ್‌ನಲ್ಲಿರುವ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಎರಡು ಹೆಚ್ಚುವರಿ ಭದ್ರತಾ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಕೊಲ್ಲಲ್ಪಟ್ಟವರು ಹಿಜ್ಬುಲ್ಲಾ ಹೋರಾಟಗಾರರು ಎಂದು ತಿಳಿಸಿದೆ.

ಹಿಜ್ಬುಲ್ಲಾ ಮತ್ತು ಇಸ್ರೇಲಿ ಮಿಲಿಟರಿ ಕಳೆದ 10 ತಿಂಗಳುಗಳಿಂದ ಗಾಜಾ ಯುದ್ಧಕ್ಕೆ ಸಮಾನಾಂತರವಾಗಿ ಹೋರಾಟ ನಡೆಸುತ್ತಿದೆ. ಟಿಟ್-ಫಾರ್-ಟಾಟ್ ಸ್ಟ್ರೈಕ್‌ಗಳು ಹೆಚ್ಚಾಗಿ ಗಡಿ ಪ್ರದೇಶಕ್ಕೆ ಸೀಮಿತವಾಗಿವೆ. ಕಳೆದ ವಾರ, ಇಸ್ರೇಲ್ ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿನ ಗುಂಪಿನ ಭದ್ರಕೋಟೆಯ ಮೇಲೆ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಮಿಲಿಟರಿ ಕಮಾಂಡರ್ ಶುಕ್ರ್‌ನನ್ನು ಕೊಂದು ಹಾಕಿತ್ತು.ಹಿಜ್ಬುಲ್ಲಾದ ನಾಯಕ, ಸಯ್ಯದ್ ಹಸನ್ ನಸ್ರಲ್ಲಾ, ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು, ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!