September 11, 2026
Friday, September 11, 2026
spot_img

ಜನಸಂಖ್ಯೆ 50%, GDP 40%, ವ್ಯಾಪಾರ 25%+: BRICS ಶಕ್ತಿಯ ಲೆಕ್ಕ ಬಿಚ್ಚಿಟ್ಟ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳ ನಡುವೆಯೂ BRICS ರಾಷ್ಟ್ರಗಳ ಆರ್ಥಿಕ ಸಾಮರ್ಥ್ಯ ವೇಗವಾಗಿ ವೃದ್ಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ BRICS ಬಿಸಿನೆಸ್ ಫೋರಂನಲ್ಲಿ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆಗೆ ಹೋಲಿಸಿದರೆ BRICS ರಾಷ್ಟ್ರಗಳ ಒಟ್ಟಾರೆ GDP ಸುಮಾರು ಎರಡು ಪಟ್ಟು ವೇಗದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.

BRICS ಪಾಲು ವಿವರಿಸಿದ ಪ್ರಧಾನಿ

BRICS ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ ಸುಮಾರು ಶೇ.50ರಷ್ಟು, ಜಾಗತಿಕ GDPಯ ಶೇ.40ರಷ್ಟು ಹಾಗೂ ಜಾಗತಿಕ ವ್ಯಾಪಾರದ ಶೇ.25ಕ್ಕೂ ಹೆಚ್ಚು ಪಾಲನ್ನು ಹೊಂದಿವೆ ಎಂದು ಮೋದಿ ವಿವರಿಸಿದರು. ಕಳೆದ ವರ್ಷಗಳಲ್ಲಿ ಜಾಗತಿಕ GDP ಸುಮಾರು 2.5 ಪಟ್ಟು ಹೆಚ್ಚಾಗಿದ್ದರೆ, BRICS ರಾಷ್ಟ್ರಗಳ ಒಟ್ಟಾರೆ GDP ಸುಮಾರು 4.5 ಪಟ್ಟು ವೃದ್ಧಿಯಾಗಿದೆ ಎಂದರು. ಇದರಿಂದ ಗುಂಪಿನ ಆರ್ಥಿಕ ಸಾಮರ್ಥ್ಯ ಜಾಗತಿಕ ಸರಾಸರಿಗಿಂತ ವೇಗವಾಗಿ ಬೆಳೆಯುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಕಳೆದ 12 ವರ್ಷಗಳಲ್ಲಿ ಭಾರತ ತನ್ನ ಆರ್ಥಿಕ ಹಾಗೂ ವ್ಯಾಪಾರ ನೀತಿಗಳಲ್ಲಿ ಸ್ಥಿತಿಸ್ಥಾಪಕತೆ, ನವೋದ್ಯಮ ಮತ್ತು ಸಹಕಾರಕ್ಕೆ ಆದ್ಯತೆ ನೀಡಿದೆ ಎಂದು ಮೋದಿ ತಿಳಿಸಿದರು. ಇಂಧನದಿಂದ ತಂತ್ರಜ್ಞಾನ ಕ್ಷೇತ್ರದವರೆಗೆ ಪೂರೈಕೆ ಸರಪಳಿಗಳನ್ನು ಹೆಚ್ಚು ವೈವಿಧ್ಯಮಯ ಹಾಗೂ ವಿಶ್ವಾಸಾರ್ಹವಾಗಿಸಲಾಗುತ್ತಿದೆ. ರಸ್ತೆ, ರೈಲು, ಬಂದರು ಮತ್ತು ವಿಮಾನ ನಿಲ್ದಾಣಗಳ ವಿಸ್ತರಣೆಯ ಜೊತೆಗೆ ಹಡಗು ನಿರ್ಮಾಣ, ಸೆಮಿಕಂಡಕ್ಟರ್, ಕ್ವಾಂಟಮ್ ತಂತ್ರಜ್ಞಾನ, ನಿರ್ಣಾಯಕ ಖನಿಜಗಳು ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಭಾರತ ಸಾಮರ್ಥ್ಯ ಹೆಚ್ಚಿಸುತ್ತಿದೆ ಎಂದರು.

ಜಾಗತಿಕ ವ್ಯಾಪಾರಕ್ಕೆ ಸಮುದ್ರ ಮಾರ್ಗಗಳು ಅಗತ್ಯ

ಜಾಗತಿಕ ವ್ಯಾಪಾರದ ಸುಗಮತೆಗೆ ಸುರಕ್ಷಿತ ಸಮುದ್ರ ಮಾರ್ಗಗಳು ಅತ್ಯಗತ್ಯ ಎಂದು ಹೇಳಿದ ಪ್ರಧಾನಿ ಹಡಗು ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹಾಗೂ ನಾವಿಕರ ಸುರಕ್ಷತೆ ಕಾಪಾಡುವುದು ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮುಕ್ತ ನೌಕಾಯಾನ ಮತ್ತು ನಾವಿಕರ ಸುರಕ್ಷತೆಯನ್ನು ಬಲವಾಗಿ ಬೆಂಬಲಿಸುತ್ತದೆ ಎಂದರು.

ಮಹಿಳಾ ಉದ್ಯಮಿಗಳ ಪಾತ್ರ

ಮಹಿಳಾ ಉದ್ಯಮಿಗಳ ಪಾತ್ರವನ್ನೂ ಪ್ರಸ್ತಾಪಿಸಿದ ಮೋದಿ, BRICS Women’s Business Alliance ಮೂಲಕ ಮಹಿಳಾ ಉದ್ಯಮಿಗಳು ಆರ್ಥಿಕ ಬೆಳವಣಿಗೆಯ ಮುಂಚೂಣಿಗೆ ಬರಬೇಕು ಎಂದ ಅವರು, ಭಾರತದಲ್ಲಿ ನಡೆದ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಭಾಗವಹಿಸಿದ್ದನ್ನು ಉಲ್ಲೇಖಿಸಿದರು.

BRICS ರಾಷ್ಟ್ರಗಳು ನವೋದ್ಯಮ ಹಾಗೂ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಭಾರತದಲ್ಲಿ ನಡೆದ ಈ ಬಾರಿಯ BRICS ಬಿಸಿನೆಸ್ ಫೋರಂ ಇದುವರೆಗಿನ ಅತಿದೊಡ್ಡ ಸಭೆಯಾಗಿದೆ ಎಂದು ಮೋದಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar