September 14, 2026
Monday, September 14, 2026
spot_img

ಖಾತೆ ಹಂಚಿಕೆ ಕೆಲಸ ಬಾಕಿ : ತಡರಾತ್ರಿ ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಚಿವ ಸಂಪುಣ ವಿಸ್ತರಣೆಯಾಗಿ ಒಂದು ವಾರ ಕಳೆದಿದ್ದರೂ ಖಾತೆ ಹಂಚಿಕೆ ಕಾರ್ಯ ಆರಂಭವಾಗಿಲ್ಲ. ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ಗಾಗಿ ಸಿಎಂ ಡಿ.ಕೆ. ಶಿವಕುಮಾರ್‌ ಕಾಯುತ್ತಿದ್ದು, ದೆಹಲಿಗೆ ತೆರಳಿ ಮಧ್ಯರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಅಸಮಾಧಾನ ತಣಿಸುವುದು ಒಂದೆಡೆಯಾದರೆ ನೂತನ ಸಚಿವರಿಗೆ ಖಾತೆ ಹಂಚಿಗೆ ಕೆಲಸ ಇನ್ನೊಂದು ಕಡೆಯಾಗಿದೆ. ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಖಾತೆ ಹಂಚಿಕೆ ಪೂರ್ಣಗೊಳಿಸುವ ಒತ್ತಡವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಸಿಎಂ ದೆಹಲಿಗೆ ತೆರಳಿದ್ದು, ರಾತ್ರಿ ಖರ್ಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ್ದಾರೆ.

ಅಗತ್ಯಬಿದ್ದರೆ ಎಲ್ಲಾದಕ್ಕೂ ಉತ್ತರ ಕೊಡ್ತೀನಿ

ಶೀಘ್ರದಲ್ಲೇ ಖಾತೆಗಳನ್ನು ಹಂಚಿಕೆ ಮಾಡಲಾಗುವುದು. ಅಗತ್ಯಬಿದ್ದರೆ ಅಧಿವೇಶನದಲ್ಲಿ ಎಲ್ಲ ಖಾತೆಯ ಬಗ್ಗೆಯೂ ನಾನೊಬ್ಬನೇ ಉತ್ತರಿಸುತ್ತೇನೆ. ವಿಧಾನಮಂಡಲ ಅಧಿವೇಶನ ಆರಂಭವಾಗುವ ಮುನ್ನವೇ ಖಾತೆ ಹಂಚಿಕೆ ಆಗಬೇಕು ಅಂತೇನಿಲ್ಲ. ಅಧಿವೇಶನ ನಡೆಯುವಾಗ ಆಯಾ ಖಾತೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಮಾತನಾಡಲು ಸೂಚಿಸುತ್ತೇನೆ ಎಂದು ಡಿಕೆಶಿ ತಿಳಿಸಿದರು. ಖಾಲಿ ಇರುವ ಒಂದು ಸಚಿವ ಸ್ಥಾನವನ್ನು ಭರ್ತಿ ಮಾಡುವ ವಿಚಾರದಲ್ಲಿ ತುರ್ತು ಇಲ್ಲ ಎಂದೂ ಸ್ಪಷ್ಟಪಡಿಸಿದರು.

ಸಾಧನೆಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿ

ಬೆಳಗ್ಗೆ ದೆಹಲಿಯಿಂದ ವಾಪಸ್ ಆಗುತ್ತಿರುವ ಡಿಕೆ ಶಿವಕುಮಾರ್, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆಯಲಿರುವ ‘ಸಾಧನೆಯ ಸಂಭ್ರಮ’ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !