ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬಿಡುಗಡೆ ಮಾಡಲ್ಪಟ್ಟಿರುವ ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕದ ವರದಿಯು ಭಾರತದಲ್ಲಿ ಬಡತನವು ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತಿದೆ. ಇದರ ಕುರಿತು ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ತಮ್ಮದೇ ಆದ ವಿವರಣೆ ನೀಡಿದ್ದು ಭಾರತದಲ್ಲಿ ವೇಗವಾಗಿ ಬಡತನ ಕಡಿಮೆಯಾಗುತ್ತಿರುವುದರ ಕುರಿತು ವಿಶ್ವಾಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಅವರು ನೀಡಿರುವ ಮಾಹಿತಿಯೇನೆಂದರೆ ಇತ್ತೀಚೆಗೆ ಬಿಡುಗಡೆಯಾಗಿರುವ 2022ರ ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ವರದಿಯ ಪ್ರಕಾರ ಬಡತನ ಕುಸಿತವು 2005-06 ರಿಂದ 2015-16 ರವರೆಗೆ ವರ್ಷಕ್ಕೆ 8.1 ಶೇಕಡಾದಷ್ಟಿತ್ತು. ನಂತರದ ದಿನಗಳಲ್ಲಿ ಬಡತನವು ವೇಗವಾಗಿ ಕುಸಿದಿದ್ದು 2015-16 ರಿಂದ 2019-21 ರವರೆಗೆ ವರ್ಷಕ್ಕೆ 11.9ಶೇಕಡಾದಷ್ಟು ಬಡತನ ಕುಸಿತವು ದಾಖಲಾಗಿದೆ.
ಅದರಲ್ಲೂ ವಿಶೇಷವಾಗಿ ಭಾರತದ ಬಡರಾಜ್ಯಗಳು ಎಂದೆನಿಸಿಕೊಂಡಿರುವ ಬಿಹಾರ, ಯುಪಿ, ಮಧ್ಯಪ್ರದೇಶ, ಜಾರ್ಖಂಡ್ ಗಳಲ್ಲಿ ಅಂತ್ಯಂತ ವೇಗವಾಗಿ ಬಡತನವು ಕುಸಿಯುತ್ತಿದೆ. ಉದಾಹರಣೆಗೆ ಬಿಹಾರದಲ್ಲಿ 2005-6 ರಲ್ಲಿ 77.4ಶೇಕಡಾದಿಂದ 2015-16ರಲ್ಲಿ 52.4ಶೇಕಡಾಕ್ಕೆ ಇಳಿದಿದೆ. 2019-20ರ ಹೊತ್ತಿಗೆ ಇದು 34.7ಶೇಕಡಾಕ್ಕೆ ತಲುಪಿದೆ. ಎಲ್ಲಾ ದೃಷ್ಟಿಕೋನದಿಂದಲೂ ಇದು ಅತ್ಯಂತ ವೇಗವಾದ ಕುಸಿತವಾಗಿದೆ. ಯಾವುದೇ ಪರಿಭಾಷೆಯಿಂದ ನೋಡಿದರೂ ಭಾರತದಲ್ಲಿ ಬಹುಆಯಾಮದ ಬಡತನವು ವೇಗವಾಗಿ ಕುಸಿಯುತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟವಾಗಿ ವಿವರಿಸುತ್ತಿವೆ.