ವಿದ್ಯುತ್ ಸ್ಥಾವರಗಳಿಗೆ ತುರ್ತು ಕಲ್ಲಿದ್ದಲು ಸಾಗಣೆಗಾಗಿ 1,100 ಪ್ಯಾಸೆಂಜರ್ ರೈಲುಗಳ ಓಡಾಟ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದೇಶದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಎದುರಾಗಬಹುದಾದ ಸಂಭಾವ್ಯ ಬಿಕ್ಕಟ್ಟು ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರವು ʼಕಲ್ಲಿದ್ದಲು ತುರ್ತುಸಾಗಣೆʼ ಉದ್ದೇಶಕ್ಕಾಗಿ ಹಲವಾರು ಪ್ಯಾಸೆಂಜರ್‌ (ಪ್ರಯಾಣಿಕ) ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಕೋವಿಡ್-19 ಸಾಂಕ್ರಾಮಿಕದ ನಂತರ ಚೇತರಿಕೆ ಕಂಡ ಕೈಗಾರಿಕಾ ಕ್ಷೇತ್ರ, ಬಿರು ಬೇಸಿಗೆ ಹಾಗೂ ಕಲ್ಲಿದ್ದಲು ಪೂರೈಕೆಯ ಕೊರತೆಯಿಂದಾಗಿ ಭಾರತವು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿದ್ಯುತ್ ಸ್ಥಾವರಗಳಲ್ಲಿ ಖಾಲಿಯಾಗುತ್ತಿರುವ ದಾಸ್ತಾನುಗಳನ್ನು ಮರುಪೂರಣಗೊಳಿಸಲು ಕಲ್ಲಿದ್ದಲು ಗಾಡಿಗಳ ವೇಗದ ಚಲನೆಗೆ ಅನುವು ಮಾಡಿಕೊಡಲು ಈ ನಿರ್ಧಾರವನ್ನು ಜಾರಿಗೊಳಿಸಲಾಗಿದೆ. ಮೇ.24 ರ ವರೆಗೆ ದೇಶದಲ್ಲಿ ಸುಮಾರು 1,100 ಪ್ಯಾಸೆಂಜರ್‌ ರೈಲುಗಳನ್ನು ರದ್ದುಮಾಡಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಎಕ್ಸ್‌ ಪ್ರೆಸ್‌ ರೈಲುಗಳ 500, ಪ್ಯಾಸೆಂಜರ್‌ ರೈಲುಗಳ 580 ಪ್ರಯಾಣಗಳು ರದ್ದಾಗಲಿವೆ. ಇದರಿಂದಾಗಿ ರೈಲುಗಳ ಸಂಚಾರ ದಟ್ಟಣೆ ಕಡಿಮೆಯಾಗಿ, ಕಲ್ಲಿದ್ದಲು ಸಾಗಿಸುವ ಸುಮಾರು 400 ರೈಲುಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.
ದೇಶದಲ್ಲಿ ಸುಡುವ ಬೇಸಿಗೆಯು ಕಲ್ಲಿದ್ದಲಿನ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್‌ ಬೇಡಿಕೆ ಮತ್ತಷ್ಟು ಹೆ ಸಾಧ್ಯತೆಗಳಿವೆ. ದೇಶದ 173 ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಪೈಕಿ 106 ಸ್ಥಾವರಗಳಲ್ಲಿ ಶೇ.25 ಕ್ಕಿಂತಲೂ ಕಡಿಮೆ ಪ್ರಮಾಣದ ಕಲ್ಲಿದ್ದಲು ಸಂಗ್ರಹವಿದೆ. 2,02,678 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿರುವ ಈ ಸ್ಥಾವರಗಳು ದೇಶದ 65% ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತವೆ. ಕಲ್ಲಿದ್ದಲು ಕೊರತೆಯಿಂದ ಹಲವು ರಾಜ್ಯಗಳಲ್ಲಿ ವಿದ್ಯುತ್‌ ಸಮಸ್ಯೆ ಬಿಗಡಾಯಿಸಿದೆ. ಈ ನಿಟ್ಟಿನಲ್ಲಿ ಕೇಂದ್ರವು ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಗೆ ತುರ್ತುಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!