ಹೊಸದಿಗಂತ ವರದಿ, ಮಂಡ್ಯ:
ಅಧಿಕಾರ ಶಾಶ್ವತವಲ್ಲ. ನಾವು ಮಾಡುವ ಅಭಿವೃದ್ಧಿ ಕಾರ‌್ಯಗಳೇ ಬಹಳ ಮುಖ್ಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಭಿಪ್ರಾಯಿಸಿದರು.
ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗಮಂದಿರದಲ್ಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧಿವಾದಿ ಬಿ.ಎಚ್.ಮಂಗೇಗೌಡ ಕೃಷಿಕ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳಿಗೆ ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಮೈಷುಗರ್ ಕಾರ್ಖಾನೆಗೆ ಮರು ಜೀವ ನೀಡಲಾಗಿದೆ. ಕಾರ್ಖಾನೆ ಪ್ರಾಯೋಗಿಕವಾಗಿ ನಡೆಯುತ್ತಿದ್ದುಘಿ, ಇಲ್ಲಿಯವರೆಗೆ 1200 ಟನ್ ಕಬ್ಬು ಅರೆಯಲಾಗಿದೆ. ಇನ್ನು ಎಂಟತ್ತು ದಿನಗಳಲ್ಲಿ ಎರಡೂವರೆಯಿಂದ ಮೂರು ಸಾವಿರ ಟನ್ ಪ್ರತಿನಿತ್ಯ ಅರೆಯಲು ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.
ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಒತ್ತಾಸೆಯಂತೆ ಪಕ್ಷಾತೀತವಾಗಿ ಅಭಿವೃದ್ಧಿ ಕಾರ‌್ಯಗಳನ್ನು ಕೈಗೊಂಡಿದ್ದೇವೆ. ಇನ್ನೂ ಕೆಲವು ನ್ಯೂನತೆಗಳಿದ್ದುಘಿ, ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರೊಟ್ಟಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ರಾಜಕೀಯ ರಂಗದಲ್ಲಷ್ಟೇ ಅಲ್ಲ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಮಂಡ್ಯ ಜಿಲ್ಲೆಯು ಶ್ರೀಮಂತವಾಗಿದೆ ಎಂದು ಬಣ್ಣಿಸಿದರು.
ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ ಸೇರಿದಂತೆ ಹಲವು ಮಹನೀಯರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮರೆಯಲು ಸಾಧ್ಯವಿಲ್ಲ, ಜಿಲ್ಲೆಯ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಲು ಇಲ್ಲಿನ ನಾಯಕರು ಕಾರಣಕರ್ತರಾಗಿದ್ದಾರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಿರುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.
ರೈತರು ಹಗಲು ಇರುಳು ಎನ್ನದೇ ದುಡಿಯುತ್ತಾರೆ, ಬಹುತೇಕ ರೈತರಿಗೆ ಯಾವ ರೀತಿ ಲಾಭದಾಯಕ ಕೃಷಿ ಚಟುವಟಿಕೆ ಬಳಸಿಕೊಳ್ಳಬೇಕು ಎನ್ನುವ ಅರಿವಿರುವುದಿಲ್ಲ, ಇಂತಹ ಸನ್ನಿವೇಶದಲ್ಲಿ ಸಾವಯವ ಕೃಷಿಕ ಕೋಣಸಾಲೆ ರಮೇಶ್ ಅವರ ಸಾಧನೆ ಅವಿಸ್ಮರಣೀಯವಾಗಿದೆ. ಇಂತಹ ಪ್ರಗತಿಪರ ರೈತರನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಗಾಂಧಿವಾದಿ ಬಿ.ಎಚ್.ಮಂಗೇಗೌಡ ಶಿಕ್ಷಕ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಣಿತ ಶಿಕ್ಷಕ ಎಸ್.ಹರ್ಷ, ಈ ಪ್ರಶಸ್ತಿಯು ನನ್ನ ಗೌರವ ಇಮ್ಮಡಿಗೊಳಿಸಿದೆ. ತಂತ್ರಜ್ಞಾನ ಆಧಾರಿತ ಕಲಿಕೆ ಇದನ್ನು ಮುಖ್ಯವಾಗಿ ಶಾಲಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಅಳವಡಿಸಿಕೊಂಡಿದ್ದೇನೆ, ಏಕೆಂದರೆ ಸರ್ಕಾರಿ ಶಾಲೆಯನ್ನು ಮೂಗು ಮುರಿಯುವ ಕಾಲದಲ್ಲಿ ಈ ಸನ್ನಿವೇಶದಲ್ಲಿ ಇದರ ಅನ್ವಯ ಬೇಕಿದೆ ಎಂಬುದರ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದೇನೆ, ಇದರಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳು ಸಹ ಟಾಪ್ನಲ್ಲಿ ಬರಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬೆಕ್ಕಳಲೆ ರಘು, ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಮಂಜಳಾ ಉದಯಶಂಕರ್, ಲೋಕೇಶ್ ಚಂದಗಾಲು ಭಾಗವಹಿಸಿದ್ದರು.