ಜಪಾನ್‌ ನಲ್ಲಿ ಪ್ರಬಲ ಭೂಕಂಪ: 4 ಸಾವು, 90 ಜನರಿಗೆ ಗಾಯ, ಸುನಾಮಿ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಪಾನ್‌ನ ಉತ್ತರ ಭಾಗದಲ್ಲಿರುವ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 7.4 ನಷ್ಟಿತ್ತು ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 90ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಹಾಗೂ ಅಗ್ನಿಶಾಮಕ ಮೂಲಗಳು ಮಾಹಿತಿ ನೀಡಿವೆ.
ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ. ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ ಬರುವ ನಗರಗಳಾದ ಮಿಯಾಗಿ ಮತ್ತು ಫುಕುಶಿಮಾಗಳಲ್ಲಿ ಭೂಮಿ ಕಂಪನ ತೀವ್ರವಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಭೂಕಂಪದಿಂದಾಗಿ ಜಪಾನ್‌ ನ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ.
11 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸೃಷ್ಟಿಯಾಗಿದ್ದ ಸುನಾಮಿಯಿಂದ ಭಾರಿ ಅನಾಹುತ ಸಂಭವಿಸಿತ್ತು. ಫುಕುಶಿಮಾ ಪರಮಾಣು ರಿಯಾಕ್ಟರ್‌ ತೀವ್ರವಾಗಿ ಹಾನಿಗೀಡಾಗಿ, ವಿಕಿರಣ ಸೋರಿಕೆಯಾಗಿತ್ತು. ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. 1 ಮೀಟರ್‌ನಷ್ಟು ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ತೀರ ಪ್ರದೇಶದಿಂದ ಹೊರಹೋಗುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!