ಹೊಸದಿಗಂತ ವರದಿ, ಅಂಕೋಲಾ:
ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿಯ ಆರಂಭಿಕ ಪಂದ್ಯಾವಳಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ಕರಾವಳಿ ಕಾವಲು ಪಡೆ ತಂಡವನ್ನು ಪರ್ತಕರ್ತರ ಸಂಘ ಭರ್ಜರಿಯಾಗಿ ಸೋಲಿಸಿ ಮುಂದಿನ ಹಂತಕ್ಕೆ ಹೋಗಿದೆ.
ಕ್ಯಾಪ್ಟನ್ ರಾಘು ಕಾಕರಮಠ ನೇತೃತ್ವದ ಪತ್ರಕರ್ತರ ಸಂಘ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅರುಣ ಶೆಟ್ಟಿ ಅವರ 20, ನಿತೀನ ಅಂಕೋಲೆಕರ್ ಅವರ 15, ಅಕ್ಷಯ ನಾಯ್ಕ ಕೃಷ್ಣಾಪುರ 19 ರನ್ ನೆರವಿನಿಂದ ಆರು ಓವರ್ ಗಳಲ್ಲಿ 75 ರನ್ ಪೇರಿಸಿತು.
ಇದಕ್ಕೆ ಬೆನ್ನಟ್ಟಿ ಹೋದ ಕರಾವಳಿ ಕಾವಲು ಪಡೆಯ ತಂಡ ಉತ್ತಮವಾಗಿ ರನ್ ಗಳಿಸಲು ಹೋರಾಡಿತಾದರೂ ಪತ್ರಕರ್ತರ ತಂಡದ ಕಾರ್ಯತಂತ್ರದಲ್ಲಿ ಮುಗ್ಗರಿಸಿ 6 ಓವರ್ ಗೆ 4 ವಿಕೆಟ್ ಕಳೆದುಕೊಂಡು 66 ರನ್ ಸೇರಿಸಲಷ್ಟೇ ಸಾಧ್ಯವಾಯಿತು. ಪತ್ರಕರ್ತರ ಸಂಘ 11 ರನ್ ವಿಜಯ ಸಾಧಿಸಿತು.
ನಾಗರಾಜ್ ಜಾಂಬಳೇಕರ್ ಅಮೂಲ್ಯ ಎರಡು ವಿಕೆಟ್ ಪಡೆದರೆ, ನಿತಿನ ಇನ್ನೆರಡು ವಿಕೆಟ್ ಪಡೆದರು. ವಿಕೆಟ್ ಕೀಪರ್ ಅಕ್ಷಯ ನಾಯ್ಕ ಬೊಬ್ರವಾಡ ಹಿಡಿದ ಎರಡು ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿತು.
ಅರುಣ ಶೆಟ್ಟಿ ಪಂದ್ಯಪುರುಷ ಪಶಸ್ತಿ ಪಡೆದರು. ರಂಜನ ನಾಯಕ, ಅಭಿಷೇಕ ನಾಯ್ಕ, ವಿಠ್ಠಲದಾಸ ಕಾಮತ್, ವಿದ್ಯಾಧ್ಯರ ಮೊರಬಾ, ಅನಂತ ಕಟ್ಟಿಮನಿ ತಂಡದಲ್ಲಿ ಆಡಿದರು.