ಇಂದಿನ ದಿನಗಳಲ್ಲಿ ಮುಖದ ಸೌಂದರ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ದೇಹದ ಇತರ ಭಾಗಗಳಿಗೂ ನೀಡುವುದು ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಅನೇಕ ಜನರಲ್ಲಿ ಕುತ್ತಿಗೆ ಮತ್ತು ಮೊಣಕೈ ಭಾಗವು ದೇಹದ ಇತರ ಚರ್ಮದ ಬಣ್ಣಕ್ಕಿಂತ ಗಾಢವಾಗಿ ಅಥವಾ ಕಪ್ಪಾಗಿ ಕಾಣಿಸಿಕೊಳ್ಳುತ್ತದೆ. ಹಾರ್ಮೋನ್‌ಗಳ ಏರುಪೇರು, ಅತಿಯಾದ ಬಿಸಿಲು, ಮಾಲಿನ್ಯ, ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ಸತ್ತ ಚರ್ಮದ ಕೋಶಗಳು ಸಂಗ್ರಹವಾಗುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಮುಖ ಎಷ್ಟೇ ಬೆಳ್ಳಗಿದ್ದರೂ ಕುತ್ತಿಗೆ ಮತ್ತು ಮೊಣಕೈ ಕಪ್ಪಾಗಿದ್ದರೆ ಅದು ಮುಜುಗರಕ್ಕೆ ಕಾರಣವಾಗಬಹುದು. ಈ ಸಮಸ್ಯೆಯನ್ನು ನಿವಾರಿಸಲು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ದುಬಾರಿ ರಾಸಾಯನಿಕ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ. ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಅತ್ಯಂತ ಸುಲಭವಾಗಿ ಈ ಕಪ್ಪನ್ನು ದೂರ ಮಾಡಬಹುದು.
ಅಕ್ಕಿ ಹಿಟ್ಟು ಮತ್ತು ಟೊಮೆಟೊ ಸ್ಕ್ರಬ್
ಇದು ಕುತ್ತಿಗೆ ಮತ್ತು ಮೊಣಕೈ ಮೇಲಿರುವ ಸತ್ತ ಚರ್ಮದ ಕೋಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. 1 ಚಮಚ ಅಕ್ಕಿ ಹಿಟ್ಟು, 1 ಚಮಚ ಟೊಮೆಟೊ ರಸ ಎರಡನ್ನೂ ಸೇರಿಸಿ ಪೇಸ್ಟ್ ಮಾಡಿ. ಕುತ್ತಿಗೆ ಮತ್ತು ಮೊಣಕೈಗೆ ಹಚ್ಚಿ 5 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮೃದುವಾಗಿ ಸ್ಕ್ರಬ್ ಮಾಡಿ ತಣ್ಣೀರಿನಿಂದ ತೊಳೆಯಬೇಕು ಇದನ್ನೂ ವಾರಕ್ಕೆ 2-3 ಬಾರಿ ಬಳಸಬಹುದು.
ಅರಿಶಿನ, ನಿಂಬೆಹಣ್ಣು ಮತ್ತು ಮೊಸರು ಪ್ಯಾಕ್
ನಿಂಬೆಹಣ್ಣು ನೈಸರ್ಗಿಕ ಬ್ಲೀಚ್ ತರಹ ಕೆಲಸ ಮಾಡುತ್ತದೆ ಮತ್ತು ಮೊಸರು ಚರ್ಮವನ್ನು ಮೃದುಗೊಳಿಸುತ್ತದೆ. 1 ಚಮಚ ಮೊಸರು, 1/2 ಚಮಚ ನಿಂಬೆರಸ, ಒಂದು ಚಿಟಿಕೆ ಅರಿಶಿನ. ಚೆನ್ನಾಗಿ ಬೆರೆಸಿ ಕಪ್ಪಾಗಿರುವ ಭಾಗಕ್ಕೆ ಹಚ್ಚಿ. 15 ರಿಂದ 20 ನಿಮಿಷ ಒಣಗಲು ಬಿಟ್ಟು, ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದನ್ನೂ ವಾರಕ್ಕೆ 2 ಬಾರಿ ಹಚ್ಚಬಹುದು.
ಆಲೂಗಡ್ಡೆ ರಸ
ಆಲೂಗಡ್ಡೆಯಲ್ಲಿರುವ ಕಿಣ್ವಗಳು ಚರ್ಮದ ಕಪ್ಪು ಕಲೆಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತವೆ.1 ಹಸಿ ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ತೆಗೆದುಕೊಂಡು ಹತ್ತಿಯ ಸಹಾಯದಿಂದ ಕುತ್ತಿಗೆ ಮತ್ತು ಮೊಣಕೈಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಬೇಕು. ಇದನ್ನೂ ಪ್ರತಿದಿನ ಅಥವಾ ವಾರಕ್ಕೆ 4 ಬಾರಿ ಮಾಡಬಹುದು.
ಇದನ್ನೂ ಓದಿ:
ಅಲೋವೆರಾ ಜೆಲ್
ಅಲೋವೆರಾದಲ್ಲಿರುವ ‘ಅಲೋಸಿನ್’ ಎಂಬ ಅಂಶವು ಚರ್ಮ ಕಪ್ಪಾಗುವುದನ್ನು ತಡೆಯುತ್ತದೆ. ತಾಜಾ ಅಲೋವೆರಾ ಜೆಲ್ ಅನ್ನು ರಾತ್ರಿ ಮಲಗುವ ಮುನ್ನ ಕುತ್ತಿಗೆ ಮತ್ತು ಮೊಣಕೈಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇ ಬಿಟ್ಟು, ಬೆಳಗ್ಗೆ ತೊಳೆಯಬೇಕು ಇದು ಚರ್ಮವನ್ನು ಹೈಡ್ರೇಟ್ ಆಗಿಡುತ್ತದೆ.



