ಹೊಸದಿಗಂತ ವರದಿ, ಮೈಸೂರು:
ಬಿಜೆಪಿ ಸಂಸದ ಪ್ರತಾಪ್ ಸಿಂಹರಿಗೆ ಈ ಬಾರಿ ಸ್ಪರ್ಧಿಸಲು ಟಿಕೆಟ್ ಸಿಗದೆ ಹಿಟ್ ವಿಕೆಟ್ ಆಗೋದರು ಎಂದು ಕೆಪಿಸಿಸಿ ವಕ್ತಾರರಾದ ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ 10 ವರ್ಷ ಸಂಸದರಾಗಿದ್ದರು. ಅವರಿಗೇ ಟಿಕೆಟ್ ಸಿಗುತ್ತೆ ಅಂತ ನಾನು ಅಂದುಕೊoಡಿದ್ದೆ. ಹಾಗಾಗಿ ಅವರ ವಿರುದ್ಧ ಸ್ಪರ್ಧೆ ಮಾಡಬೇಕು ಅಂತ ಪಟ್ಟು ಹಿಡಿದು ಪಕ್ಷದಿಂದ ಈಗ ಟಿಕೆಟ್ ತೆಗೆದುಕೊಂಡು ಬಂದೆ. ಆದರೆ ಪ್ರತಾಪ್ ಸಿಂಹ ಅವರಾಗಿ ಅವರೇ ಔಟ್ ಆಗಿಬಿಟ್ರು. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದು ಯಾಕೆ? ಕಾರಣ ಏನು ಅಂತ ಬಿಜೆಪಿಯವರು ಹೇಳಬೇಕು. ಪ್ರತಾಪ್ ಸಿಂಹ ವಿರುದ್ಧ ಆಡಿಯೋ, ವಿಡಿಯೋ ಏನಾದರೂ ಇತ್ತಾ? ಏನಾದರೂ ದಾಖಲೆಗಳಿದ್ದವೇ ಅಥವಾ ವರಿಷ್ಠರು ಕರೆದು ಹೇಳಿದರಾ, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು ಕಾರಣ ಏನು ಅಂತ ಇನ್ನೂ ಗೊತ್ತಾಗಿಲ್ಲ ಎಂದರು.
ನಾಲ್ಕು ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಈ ಹಿಂದೆ ಮತದಾರರು ನನ್ನನ್ನು ಕೈ ಹಿಡಿಯಲಿಲ್ಲ. ಆದರೆ ಈಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೇ ಸೂಕ್ತ ಅಭ್ಯರ್ಥಿ ಎಂದು ಪಕ್ಷ ನನಗೆ ಟಿಕೆಟ್ ಕೊಟ್ಟಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತರೆ ನಾನು ಸತ್ತಂತೆ ಎಂದು ಹೇಳಿದರು.
ಮೈಸೂರು ರಾಜಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದವರು. ಮೀಸಲಾತಿ ವಿರುದ್ಧವಿರುವ ಬಿಜೆಪಿಯಿಂದ ಯದುವೀರ್ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರೆ ನಾವು ಟಿಕೆಟ್ ಕೊಡಿಸುತ್ತಿದ್ದೆವು. ಯದುವೀರ್ ಮೇಲೆ ಒತ್ತಡ ಹಾಕಿ ಚುನಾವಣೆಗೆ ಕರೆ ತಂದಿದ್ದು ಯಾರೆಂದು ಪ್ರತಾಪ್ ಸಿಂಹ ತಿಳಿಸಲಿ ಎಂದು ಟಾಂಗ್ ಕೊಟ್ಟರು.