ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಚಾರ್ಜ್ ಶೀಟ್ ನಲ್ಲಿತ್ತು ಆಘಾತಕಾರಿ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತಂತೆ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯಕ್ಕೆ 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಪಾಪ್ಯುಲರ್ ಫ್ರಂಡ್ ಆಫ್ ಇಂಡಿಯಾ(ಪಿಎಫ್‌ಐ) ಹಿಂದು ಸಮುದಾಯದಲ್ಲಿ ಆತಂಕ ಹುಟ್ಟಿಸಲೆಂದೇ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದೆ ಎಂಬುದನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ತನ್ನ ಕಾರ್ಯಸೂಚಿಯ ಭಾಗವಾಗಿ ಹತ್ಯೆ ನಡೆಸಲಾಗಿದೆ. ಅಲ್ಲದೆ ಹಿಂದು ಸಮುದಾಯದಲ್ಲಿ ಆತಂಕ ಹುಟ್ಟಿಸುವುದು ಉಲ್ಲೇಖವಾಗಿರುವ ಪ್ರಮುಖ ಅಂಶಗಳಾಗಿವೆ. ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರೇ ನಡೆಸಿದ್ದಾರೆ ಎಂಬುದನ್ನು ಕೂಡ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

240 ಸಾಕ್ಷಿ ದಾರರ ಹೇಳಿಕೆ ದಾಖಲು
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ 1500 ಪುಟಗಳ ಆರೋಪ ಪಟ್ಟಿಯನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅಲ್ಲದೆ240 ಸಾಕ್ಷಿದಾರರ ಹೇಳಿಕೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 120ಬಿ, 153ಎ, 302, 34, 1967ರ ಕಾನೂನು ಬಾಹಿರ ಚಟುವಟಿಕೆ ತಡೆ(ಯುಎಪಿ) ಕಾಯ್ದೆಯ ಸೆಕ್ಷನ್ 16, 18 ಮತ್ತು 20 ಸಶಸ್ತ್ರ ಕಾಯ್ದೆಯ ಸೆಕ್ಷನ್ 25 (1) (ಎ) ಅಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐ ಸಂಘಟನೆ ಈ ಕೃತ್ಯವೆಸಗಿದೆ ಎಂದು ಹೇಳಲಾಗಿದೆ.

ಜು.26 ರಂದು ರಾತ್ರಿ ನಡೆದಿತ್ತು ಹತ್ಯೆ
2022 ರ ಜು.26 ರಂದು ರಾತ್ರಿ 8.30 ರ ಸುಮಾರಿಗೆ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಸಮಗ್ರ ತನಿಖೆಗೆ ಎನ್‌ಐಎಗೆ ವಹಿಸಿತ್ತು.
ಪ್ರಕರಣದ ಜಾಡು ಹಿಡಿದ ಎನ್‌ಐಎ ಅಧಿಕಾರಿಗಳ ತಂಡ ಪ್ರಮುಖ 20  ಮಂದಿ ಆರೋಪಿಗಳನ್ನು ಗುರುತಿಸಿತ್ತು. ಈ ಪೈಕಿ ಈಗಾಗಲೇ 15  ಮಂದಿಯ ಬಂಧನವಾಗಿದ್ದು, 5 ಮಂದಿ ತಲೆಮರೆಸಿಕೊಂಡಿದ್ದಾರೆ.

20  ಮಂದಿ ವಿರುದ್ಧ ಆರೋಪ ಪಟ್ಟಿ
ಒಟ್ಟು 20 ಮಂದಿ ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಮಹಮ್ಮದ್ ಸಯ್ಯದ್(26) ಸುಳ್ಯ, ಅಬ್ದುಲ್ ಬಶೀರ್(29) ಎಲಿಮಲೆ ಸುಳ್ಯ, ರಿಯಾಜ್(28) ಅಂಕತಡ್ಕ, ಮುಸ್ತಫಾ ಪೈಚಾರ್(48) ಸುಳ್ಯ, ಮಸೂದ್ ಕೆ.ಎ.(40), ನೆಕ್ಕಿಲಾಡಿ, ಕೊಡಾಜೆ ಮೊಹಮ್ಮದ್ ಶರೀಫ್(53), ಅಬೂಬಕ್ಕರ್ ಸಿದ್ದಿಕ್(38) ಬೆಳ್ಳಾರೆ, ನೌಫಾಲ್(38) ಬೆಳ್ಳಾರೆ, ಇಸ್ಮಾಯಿಲ್ ಶಾಫಿ ಬೆಳ್ಳಾರೆ, ಮಹಮ್ಮದ್ ಇಕ್ಬಾಲ್ ಬೆಳ್ಳಾರೆ, ಶಹೀದ್ ಎಂ.(38) ಮಂಜನಾಡಿ, ಮಹಮ್ಮದ್ ಶಫೀಕ್(28) ಸುಳ್ಯ, ಉಮರ್ ಫಾರೂಕ್(22) ಸುಳ್ಯ, ಅಬ್ದುಲ್ ಕಬೀರ್(33) ಸುಳ್ಯ, ಮಹಮ್ಮದ್ ಇಬ್ರಾಹಿಂ ಷಾ(23) ಸುಳ್ಯ, ಜೈನುಲ್ ಅಬೀದ್(23) ಸುಳ್ಯ, ಶೇಖ್ ಸದ್ದಾಂ ಹುಸೇನ್(28) ಬೆಳ್ಳಾರೆ, ಝಾಕೀರ್ ಎ.(30)ಬೆಳ್ಳಾರೆ, ಅಬ್ದುಲ್ ಹ್ಯಾರಿಸ್(40) ಬೆಳ್ಳಾರೆ, ತುಫಾಯಿಲ್ ಎಂ.ಎಚ್.(36) ಮಡಿಕೇರಿ ವಿರುದ್ಧ ಆರೋಪ ಪಟ್ಟಿ ದಾಖಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳು
ಆರೋಪಿಗಳಲ್ಲಿ ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು, ಐದನೇ ಆರೋಪಿ ಮಸೂದ್ ಕೆ.ಎ, ಆರನೇ ಆರೋಪಿ ಕೊಡಾಜೆ ಮೊಹಮ್ಮದ್ ಶರೀಫ್, ಏಳನೇ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹಾಗೂ 20ನೇ ಆರೋಪಿ ತುಫಾಯಿಲ್ ಎಂ.ಎಚ್. ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳ ಸುಳಿವು ನೀಡಿದವರಿಗೆ ಎನ್‌ಐಎ ಅಧಿಕಾರಿಗಳು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!