ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮನೆ ಮಂದಿಗೆ ಧೈರ್ಯ ತುಂಬಿದ ಬಿ.ವೈ.ವಿಜಯೇಂದ್ರ 

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮುಂದಾಳು ಬೆಳ್ಳಾರೆಯ ಪ್ರವೀಣ್  ನೆಟ್ಟಾರು ಅವರ ಮನೆಗೆ ಇಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ,  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಅವರ ಮನೆಯವರಿಗೆ ಸಾಂತ್ವನ ಹೇಳಿದರು.
ಪ್ರವೀಣ ಪತ್ನಿ  ತಾಯಿ, ತಂದೆ ಹಾಗೂ ಕುಟುಂಬಸ್ಥರ ನೋವನ್ನು ಆಲಿಸಿದರು. ಬಳಿಕ ಅವರು ಸಚಿವ ಎಸ್. ಅಂಗಾರ ಹಾಗೂ ಇತರ ಶಾಸಕರ ಜತೆ ಸಮಾಲೋಚಿಸಿ ಪ್ರವೀಣ್ ನೆಟ್ಟಾರು ಪತ್ನಿ ಶ್ರೀಮತಿ ನೂತನರಿಗೆ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಪ್ರವೀಣ್ ಬಡವರಾಗಿದ್ದು, ಅವರ ಕುಟುಂಬಕ್ಕೆ ಆಧಾರವಾಗಿದ್ದ ಪ್ರವೀಣರನ್ನು ಕಳಕೊಂಡು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ವ್ಯವಸ್ಥೆ ಮಾಡಲಾಗುವುದು.‌  ಅಲ್ಲದೇ ಅವರ ಮನೆ ಸಹ ತುಂಬ ಚಿಕ್ಕದಾಗಿದೆ.‌ ಹೊಸ ಮನೆ ಕಟ್ಟಲು ಪ್ರವೀಣ್ ಸಿದ್ದತೆ ನಡೆಸಿದ್ದರು. ಆದ್ದರಿಂದ ಅವರಿಗೆ ಹೊಸ ಮನೆಯನ್ನು ಸಹ  ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ಅದಕ್ಕಿಂತ ಮೊದಲು ಸಚಿವ ಅಂಗಾರರನ್ನು , ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯರು ಮನೆಗೆ ಬಂದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರವೀಣರ ಪತ್ನಿ ಹಾಗೂ ಮನೆಯವರು ‘ದಯವಿಟ್ಟು ಹಿಂದೂಗಳಿಗೆ ರಕ್ಷಣೆ ಕೊಡಿ’ ಎಂದು ವಿನಂತಿ ಮಾಡಿಕೊಂಡರು.  ಪ್ರವೀಣರ ಪತ್ನಿ ತಮ್ಮ ನೋವು ತೋಡಿಕೊಂಡು  ‘ನನ್ನ ಪತಿಯ ಹತ್ಯೆಯೇ ಕೊನೆಯ ಹತ್ಯೆಯಾಗಬೇಕು. ಅಪರಾಧಿಗಳನ್ನು ಇನ್ಯಾವತ್ತೂ ಹೊರಗೆ ಬರದಂತೆ ನೋಡಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅನುಸರಿಸುವ ಕಠಿಣ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಹತ್ಯೆಕೋರರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ಸಚಿವ ಎಸ್. ಅಂಗಾರ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಶಾಸಕರುಗಳಾದ ಬಂಟ್ವಾಳದ ರಾಜೇಶ್ ನಾಯಕ್ ಉಳಿಪಾಡಿಗುತ್ತು , ಬೆಳ್ತಂಗಡಿಯ ಹರೀಶ್ ಪೂಂಜಾ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮೊದಲಾದವರು ಅವರೊಂದಿಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!