August 30, 2026
Sunday, August 30, 2026
spot_img

ಡಿಎನ್‌ಎ ಟೆಸ್ಟ್‌ ಮಾಡಿಸೋಣ ಎಂದ ಕಾಟ ಕೊಟ್ಟ ಪತಿ, ಬೇಸತ್ತು ಆತ್ಮಹತ್ಯೆಗೆ ಶರಣಾದ ಗರ್ಭಿಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗರ್ಭದಲ್ಲಿರುವ ಮಗು ನನ್ನದಾ ಇಲ್ಲವಾ ಎನ್ನುವ ಅನುಮಾದಲ್ಲಿ ಪತಿಯೊಬ್ಬ ಪತ್ನಿಗೆ ಡಿಎನ್‌ಎ ಟೆಸ್ಟ್‌ ಮಾಡಿಸುವಂತೆ ಪೀಡಿಸಿದ್ದು, ಮನನೊಂದು ಗರ್ಭಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮೇದಕ್‌ ಜಿಲ್ಲೆಯ ಅಲ್ಲಾದುರ್ಗ್‌ದ ಗಡಿಪೆದ್ದಾಪುರ ಗ್ರಾಮದ ಸುಶ್ಮಿತಾ (23) ಮೃತರು. 18 ತಿಂಗಳ ಹಿಂದೆ ಸುಶ್ಮಿತಾ ಹಾಗೂ ಅಭಿಲಾಷ್‌ ಮದುವೆಯಾಗಿದ್ದರು. ಸುಶ್ಮಿಕಾ ನಡತೆಯ ಬಗ್ಗೆ ಗಂಡನ ಮನೆಯಲ್ಲಿ ಅನುಮಾನ ಇತ್ತು. ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅತ್ತೆ ಗಂಡ ಸೇರಿಕೊಂಡು ನನ್ನ ಮಗಳನ್ನು ಆತ್ಮಹತ್ಯೆ ಕೂಪಕ್ಕೆ ತಳ್ಳಿದ್ದಾರೆ ಎಂದು ಸುಶ್ಮಿತಾ ತಾಯಿ ದೂರಿದ್ದಾರೆ.

ಸುಶ್ಮಿತಾ ಸೀಮಂತದ ಬಗ್ಗೆ ಮಾತನಾಡೋಕೆ ಹೋಗಿದ್ದೆವು. ಆದರೆ ಸುಶ್ಮಿತಾ ಅತ್ತೆ ಮನೆಯಲ್ಲಿ ಗಲಾಟೆ ನಡೆದಿತ್ತು. ಮಗುವಿಗೆ ಡಿಎನ್‌ಎ ಪರೀಕ್ಷೆ ಆಗಬೇಕು ಎಂದು ಅಭಿಲಾಷ್‌ ಪಟ್ಟು ಹಿಡಿದು ಕುಳಿತಿದ್ದರು. ಜನರು ಮಧ್ಯಪ್ರವೇಶಿಸಿ ಬುದ್ಧಿ ಹೇಳಿದ್ದರು. ತಕ್ಷಣಕ್ಕೆ ಸುಮ್ಮನಾಗಿದ್ದ ಅಭಿಲಾಷ್‌ ಹಾಗೂ ಫ್ಯಾಮಿಲಿ ಜನರೆಲ್ಲ ಹೋದಮೇಲೆ ಕಿರುಕುಳ ನೀಡಿದ್ದಾರೆ. ಇದಾದ ಎರಡೇ ದಿನಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸುಶ್ಮಿಕಾ ತಾಯಿ ಕಣ್ಣೀರಿಟ್ಟಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಂಗರೆಡ್ಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 85, 108ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಾದುರ್ಗ್ ಪೊಲೀಸರು ಆರೋಪಿ ಪತಿ ಜಿ.ಅಭಿಲಾಷ್ ಮತ್ತು ಆತನ ತಾಯಿಯನ್ನು ಬಂಧಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ಡಿ.ಶಂಕರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !