ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲ ಬದಲಾಗಿದೆ, ವಿಜ್ಞಾನ-ತಂತ್ರಜ್ಞಾನದಿಂದ ಎಲ್ಲಾ ರಂಗಗಳೂ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದುವರಿದ ಸಮಾಜದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಜಾಗತಿಕ ಮಟ್ಟ ತಲುಪುತ್ತಿರುವ ಈ ಕಾಲದಲ್ಲೂ ಕೆಲ ಹಳ್ಳಿಗಳ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅನೇಕರು ಕನಿಷ್ಠ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿ ಚಿಕಿತ್ಸೆಗಾಗಿ ಕಿಲೋಮೀಟರ್ ಗಟ್ಟಲೆ ನಡೆಯಬೇಕಾಗಿರುವ ದುಸ್ಥಿತಿ ಈಗಲೂ ಇದೆ. ಇಂಥದ್ದೇ ಘಟನೆ ಈಗ ಅಲ್ಲೂರಿ ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಪೆದಬಯಲು ಮಂಡಲ ಇಂಜರಿ ಪಂಚಾಯತ್ ತುಳಮದಲ್ಲಿ ಗರ್ಭಿಣಿಯೊಬ್ಬರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು. ಗ್ರಾಮದಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯವಿಲ್ಲ, ಹಳ್ಳಿ ದಾಟಬೇಕಾದರೆ ಬಸ್ ವ್ಯವಸ್ಥೆಯೂ ಇಲ್ಲದೆ ಮೂರು ಕಿಲೋಮೀಟರ್ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಸಂಬಂಧಿಕರು ಡೋಲಿಯಲ್ಲಿ ಹೊತ್ತು ಮೂರು ಕಿ.ಮೀ. ನಡೆದಿದ್ದಾರೆ. ಆಕೆಯ ಇಬ್ಬರು ಮಕ್ಕಳೂ ಸಾಥ್ ಕೊಟ್ಟಿದ್ದಾರೆ. 40 ಕಿ.ಮೀ ಕ್ರಮಿಸಿದ ನಂತರ ಗರ್ಭಿಣಿಯನ್ನು ಕಷ್ಟಪಟ್ಟು ಜಿ.ಮಡುಗುಳ ಆಸ್ಪತ್ರೆಗೆ ಸೇರಿಸಲಾಯಿತು. ಈ ಕುರಿತು ಮಾತನಾಡಿದ ಸ್ಥಳೀಯರು ನಮ್ಮ ಊರಿಗೆ ಹತ್ತಿರವಾಗಿ ಯಾವುದೇ ಸೌಕರ್ಯಗಳು ಇಲ್ಲ. ಮೊನ್ನವರೆಗೂ ಸಿಗ್ನಲ್ ಸಮಸ್ಯೆಯಿತ್ತು. ಸಮೀಪದ ಇಟಿವಾಳ ಗ್ರಾಮದಲ್ಲಿ ಸೆಲ್ ಟವರ್ ನಿರ್ಮಾಣದಿಂದ ಆ ಸಮಸ್ಯೆ ತೀರಿದೆ. ವೈದ್ಯಕೀಯ, ಸಾರಿಗೆ ಹೀಗೆ ಹಲವು ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ ಎಂದು ತಮ್ಮ ಕಷ್ಟ-ಸುಖವನ್ನು ಸ್ಥಳೀಯ ಮಾಧ್ಯಮಗಳ ಮುಂದೆ ಹೇಳಿಕೊಂಡರು.