ಬ್ರಿಟೀಷರಿಗೆ ಕ್ರಾಂತಿಕಾರಿಯ ಮಾಹಿತಿ ನೀಡಿದ್ದ ದ್ರೋಹಿಯನ್ನು ಕೊಂದು ನೇಣುಗಂಬಕ್ಕೇರಿದ್ದರು ಪ್ರೇಮ್ ಸಿಂಗ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಪ್ರೇಮ್ ಸಿಂಗ್ ಪಂಜಾಬಿನ ಅಮೃತಸರ ಜಿಲ್ಲೆಯ ಸುರ್ ಸಿಂಗ್ ಗ್ರಾಮಕ್ಕೆ ಸೇರಿದವರು. ಅವರ ತಂದೆ ಜೀವನ್ ಸಿಂಗ್ ಒಬ್ಬ ಸಾಧಾರಣ ರೈತ. ಪ್ರೇಮ್ ಸಿಂಗ್ ಪಂಜಾಬ್‌ನ ಮಜಾ ಪ್ರದೇಶದಲ್ಲಿ ಗದರ್ ಪಕ್ಷದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಜಾರ್ ಸಾಹಿಬ್ ಗುರುದ್ವಾರದ ದಫೇದಾರ್ ಲಚ್ಮನ್ ಸಿಂಗ್, ನಾಥ ಸಿಂಗ್ ಮತ್ತು ಬೋಗ್ ಸಿಂಗ್ ಅವರೊಂದಿಗೆ ಸೇರಿ ಕ್ರಾಂತಿಕಾರಿಗಳ ಗುಂಪನ್ನು ರಚಿಸಿಕೊಂಡರು. ಇವರೆಲ್ಲರ ಪ್ರಭಾವದಿಂದ ಜಾರ್ ಸಾಹಿಬ್ ಗುರುದ್ವಾರವು ಗದರ್ ಪಕ್ಷದ ಸದಸ್ಯರ ರಹಸ್ಯ ಸಭೆಯ ಸ್ಥಳವಾಯಿತು. ಲಾಲ್ ಸಿಂಗ್ ಭುರೆ, ನಿಧನ್ ಸಿಂಗ್, ಗುಜ್ಜರ್ ಸಿಂಗ್ ಮತ್ತು ಇತರ ಗದರ್ ಪಕ್ಷದ ಪ್ರಮುಖ ಸದಸ್ಯರು ಗುರುದ್ವಾರಕ್ಕೆ ಆಗಾಗ ಬರುತ್ತಿದ್ದರು. ಇವರೆಲ್ಲರೂ ಸೇರಿ ಯೋಜನೆಯೊಂದನ್ನು ಸಿದ್ಧಪಡಿಸಿ, ಬ್ರಿಟೀಷರ 23ನೇ ಅಶ್ವಸೈನ್ಯದ ಸೈನಿಕರನ್ನು ಸಂಪರ್ಕಿಸಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದಂಗೆ ಏಳುವಂತೆ ಅವರನ್ನು ಸಿದ್ಧಪಡಿಸಿದರು. ದಫ್ತಾರ್ ಲಚ್ಮಣ್ ಸಿಂಗ್ ಅವರು ಗದರ್ ಪಾರ್ಟಿಗೆ ತಮ್ಮ ಬದ್ಧತೆಯ ಸಂಕೇತವಾಗಿ ಪ್ರೇಮ್ ಸಿಂಗ್ ಅವರಿಗೆ ಖಡ್ಗವನ್ನು ನೀಡಿದರು. ಸೈನಿಕರಾದ ಸುಚಾ ಸಿಂಗ್, ನಿಹಾಲ್ ಸಿಂಗ್ ಮತ್ತು ಇತರರು ಯೋಜಿತ ದಂಗೆಯಲ್ಲಿ ಭಾಗವಹಿಸಲು ನವೆಂಬರ್ 1914 ರಲ್ಲಿ ಜಾರ್ ಸಾಹಿಬ್‌ನಲ್ಲಿ ಒಟ್ಟುಗೂಡಿದರು.
ಆದರೆ ಅದು ಹೇಗೋ ದಂಗೆಯ ಸುಳಿವು ಅರಿತ ಪೊಲೀಸರು ಗುರುದ್ವಾರದ ಮೇಲೆ ದಾಳಿ ಮಾಡಿ ಗದರ್‌ ಗಳನ್ನು ಬಂಧಿಸಿದರು. ಈ ವೇಳೆ ಪರಾರಿಯಾಗುವಲ್ಲಿ ಪ್ರೇಮ್ ಸಿಂಗ್ ಯಶಸ್ವಿಯಾದರು.
1915 ರ ಮಾರ್ಚ್ 21 ಪಾದ್ರಿ ಗ್ರಾಮದ ಲೇವಾದೇವಿಗಾರ ಕಪೂರ್ ಸಿಂಗ್‌ನಿಂದ ಸುಳಿವು ಪಡೆದ ಪೊಲೀಸರು ಲಾಲ್ ಸಿಂಗ್ ಭುರೆ ಎಂಬ ಮತ್ತೊಬ್ಬ ಗದರ್‌ ನಾಯಕನನ್ನು ಬಂಧಿಸಿದರು. ಇದರಿಂದ ಕ್ರಾಂತಿಕಾರಿಗಳು ಆಕ್ರೋಶಗೊಂಡರು. ಪ್ರೇಮ್ ಸಿಂಗ್ ಅವರು ಕಪೂರ್ ಸಿಂಗ್ ನನ್ನು ಶಿಕ್ಷಿಸುವ ನಿರ್ಧಾರವನ್ನು ಮಾಡಿದರು. ಅವರು ಹಾರ್ದಿತ್ ಸಿಂಗ್ ಮತ್ತು ಇಂದರ್ ಸಿಂಗ್ ಎಂಬ ಇಬ್ಬರು ಕ್ರಾಂತಿಕಾರಿಗಳೊಡನೆ ಕಪೂರ್ ಸಿಂಗ್ ಇದ್ದ ಗ್ರಾಮಕ್ಕೆ ಆಗಮಿಸಿದರು. ಲಾಲ್ ಸಿಂಗ್ ಬಂಧನದ ಸೇಡು ತೀರಿಸಿಕೊಳ್ಳಲು ಪ್ರೇಮ್ ಸಿಂಗ್ ಕಪೂರ್ ಸಿಂಗ್ ಹಣೆಗೆ ಗುಂಡು ಹಾರಿಸಿದರು. ತಮ್ಮ ನಿಷ್ಠಾವಂತ ಸೇವಕನ ಕೊಲೆ ಪ್ರಕರಣದಲ್ಲಿ ಬ್ರಿಟೀಷರು ಪ್ರೇಮ್ ಸಿಂಗ್ ಅವರನ್ನು ಬಂಧಿಸಿ ಸೆಕ್ಷನ್ 302 ಮತ್ತು 398 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಿದರು. ಈ ಪ್ರಕರಣದಲ್ಲಿ ಪ್ರೇಮ್‌ ಸಿಂಗ್‌ರಿಗೆ ಮರಣದಂಡನೆ ವಿಧಿಸಲಾಯಿತು. ಮೇ 16, 1916 ರಂದು ಅವರನ್ನು ಲಾಹೋರ್ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!