‘ಮಿಷನ್ ದಕ್ಷಿಣ್’ ಯೋಜನೆಯನ್ವಯ ಬಿಜೆಪಿ ಪ್ರಬಲಗೊಳಿಸಲು ಸಿದ್ಧತೆ : ಪತ್ರಿಕಾಗೋಷ್ಟಿಯಲ್ಲಿ ಸಿ.ಟಿ.ರವಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಯಾವುದೇ ತಾರತಮ್ಯವಿಲ್ಲದೇ ಕೇಂದ್ರಸರಕಾರದ ಎಲ್ಲ ಫಲಾಭವಿಗಳನ್ನು ಪಕ್ಷದೊಂದಿಗೆ ಜೋಡಿಸಿಕೊಂಡು ಬಿಜೆಪಿಯನ್ನು ಪ್ರಬಲಗೊಳಿಸಲು ʼಮಿಷನ್‌ ದಕ್ಷಿಣ್‌ʼ ಯೋಜನೆ ಬಗ್ಗೆ ಚರ್ಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

‘ಮಿಷನ್ ದಕ್ಷಿಣ್’ ಯೋಜನೆಯನ್ವಯ ಜನಸಂಖ್ಯೆಯ ಶೇ 70ಕ್ಕೂಹೆಚ್ಚಿರುವ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ನಾವು ತಲುಪಬೇಕು. ಯಾವುದೇ ಜಾತಿಭೇದದ ತಾರತಮ್ಯವಿಲ್ಲದೆ ಬಡವರು, ದಲಿತರು, ಶೋಷಿತರು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಮಾಡಿದೆ. ಆ ಫಲಾನುಭವಿಗಳನ್ನು ಪಕ್ಷದ ಜೊತೆ ಜೋಡಿಸಿ ದಕ್ಷಿಣವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಮಿಷನ್ ದಕ್ಷಿಣ್ ಯೋಜನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಿಷಯ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಸ್ನೇಹಯಾತ್ರೆಯ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಬಿಜೆಪಿಯ ವಿಚಾರ, ನಮ್ಮ ಸರಕಾರದ ಯೋಜನೆಗಳನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡಬೇಕೆಂಬ ಸಂಕಲ್ಪವೂ ಸಭೆಯಲ್ಲಿ ವ್ಯಕ್ತವಾಗಿದೆ. ಈಶಾನ್ಯದಲ್ಲಿ ಶೇ 90- 95ರಷ್ಟು ಅಲ್ಪಸಂಖ್ಯಾತರಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿದೆ. ಅಲ್ಲಿನ ಜನಪ್ರತಿನಿಧಿಗಳನ್ನು ರಾಯಭಾರಿಗಳಾಗಿ ಬಳಸಿ ನಮ್ಮಿಂದ ದೂರ ಇರುವ ವರ್ಗವನ್ನು ತಲುಪಬೇಕೆಂಬ ಸಲಹೆ ವ್ಯಕ್ತವಾಗಿದೆ ಎಂದು ಅವರು ವಿವರಿಸಿದರು.

ಇನ್ನು ಸುದ್ದಿಗೋಷ್ಟಿಯಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು ಅವುಗಳ ವಿವರ ಇಲ್ಲಿದೆ :

  • ತುಷ್ಟೀಕರಣದ ರಾಜಕೀಯ ಒಂದು ಕಡೆಗಿದ್ದರೆ, ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ (ಸಬ್ ಕಾ ಸಾಥ್ ಸಬ್ ಕಾವಿಕಾಸ್) ರಾಜಕಾರಣ ಇನ್ನೊಂದು ಕಡೆ ಇದೆ. ಜಾತಿವಾದದಡಿ ರಾಜಕೀಯದ ಕೋಟೆ ಕಟ್ಟುವ ಸ್ವಾರ್ಥದ ರಾಜಕೀಯ ಒಂದೆಡೆ ಇದ್ದರೆ, ರಾಷ್ಟ್ರವಾದದ ಹಿನ್ನೆಲೆಯಲ್ಲಿ ರಾಜಕಾರಣ ಮಾಡುವ ಬಿಜೆಪಿ ಇನ್ನೊಂದು ಕಡೆಗೆ ಇದೆ. ಪರಿವಾರ ರಾಜಕೀಯ ಈಗ ಸಂಕಷ್ಟದಲ್ಲಿದೆ. ಬಿಜೆಪಿ ಬೆಳವಣಿಗೆಯಿಂದ ಪರಿವಾರವಾದಿಗಳು, ಜಾತಿವಾದಿಗಳು ಕಂಗೆಟ್ಟಿದ್ದಾರೆ. ಅವರೆಲ್ಲರೂ  ರಕ್ಷಿಸಿಕೊಳ್ಳಲು ಕಾಲಕಾಲಕ್ಕೆ ಮುಖವಾಡ ಹಾಕುತ್ತಾರೆ. ಜಾತ್ಯತೀತತೆಯೂ ಅವರ ಜಾತಿ ರಾಜಕಾರಣವನ್ನು ಮುಚ್ಚಿಕೊಳ್ಳುವ ಮುಖವಾಡವಾಗಿದೆ.
  • ನ್ಯಾಷನಲ್ ಕಾನ್ಫರೆನ್ಸ್, ಆರ್‍ಜೆಡಿ, ಸಮಾಜವಾದಿ ಪಕ್ಷ, ಜೆಡಿಎಸ್ ಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಇವರೆಲ್ಲರೂ ಆಂತರಿಕ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಾರೆ. ಬಿಜೆಪಿಯ ಬೆಳವಣಿಗೆ ಜಾತಿವಾದಿ, ಪರಿವಾರವಾದಿ, ತುಷ್ಟೀಕರಣವಾದಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ಹಾಕಿದೆ. ಅವರೆಲ್ಲ ಬಾಲ ಸುಟ್ಟ ಬೆಕ್ಕಿನಂತೆ ಚೀರಾಡುತ್ತಿದ್ದಾರೆ.
  • ಮೊದಲಬಾರಿಗೆ ಬಿಜೆಪಿಗೆ ರಾಷ್ಟ್ರಪತಿ ಆಯ್ಕೆಮಾಡುವ ಅವಕಾಶ ಸಿಕ್ಕಾಗ ಅಬ್ದುಲ್‌ ಕಲಾಂರನ್ನು ಆಯ್ಕೆ ಮಾಡಿತ್ತು. ಆಮೇಲೆ ಮತ್ತೆ ಅವಕಾಶ ಲಭಿಸಿದಾಗ ದಲಿತ ವರ್ಗದ ರಾಮನಾಥ ಕೋವಿಂದ್ ಅವರನ್ನು ಮೋದಿಯವರ ನೇತೃತ್ವದ ಎನ್‍ಡಿಎ ಆಯ್ಕೆ ಮಾಡಿತ್ತು. ಈಗ ಆದಿವಾಸಿ ಸುಶಿಕ್ಷಿತ ಮಹಿಳೆ, ಬಡತನದ ನೋವನ್ನು ಅನುಭವಿಸಿ, ಕಷ್ಟಪಟ್ಟು ಓದಿ, ಶಾಸಕಿ, ಸಚಿವೆ ಮತ್ತು ರಾಜ್ಯಪಾಲರಾಗಿ ಅನುಭವದ ಗಣಿಯಾಗಿರುವ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸಲಾಗಿದೆ.
  • ಇ.ಡಿ, ಐಟಿ ದುರ್ಬಳಕೆ ಕುರಿತ ಪ್ರಶ್ನೆಗೆ ಅವರ ಉತ್ತರ ಹೀಗಿದೆ  “ಯಾರು ಪ್ರಾಮಾಣಿಕರಿರುತ್ತಾರೋ ಅವರನ್ನು ಇ.ಡಿ, ಐಟಿ ಏನೂ ಮಾಡಲಾಗದು. ಯಾರು ಭ್ರಷ್ಟರೋ ಅವರು ಇ.ಡಿ, ಐಟಿಯಿಂದ ತಪ್ಪಿಸಿಕೊಳ್ಳಲಾಗದು. ಭ್ರಷ್ಟರಾದರೆ ಭಯಪಡಲೇ ಬೇಕು”
  •  ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಎಂಬ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಗೋವಾದಲ್ಲಿ ಏನಾಯಿತು? ಪಂಜಾಬ್‍ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸ್ಥಿತಿ ಏನಾಗಿದೆ? ಯುಪಿಯಲ್ಲಿ ಮೈ ಲಡ್‍ಕೀ ಹೂಂ, ಮೈ ಲಡ್ ಸಖ್‍ತಾ ಹೈ ಎಂದು ಘೋಷಣೆ ಹಾಕಿ ನಾಟಕ ಮಾಡಿದರೂ  399 ರಲ್ಲಿ 387 ಸ್ಥಾನಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತು. ಹಾಗೇ ಕಾಂಗ್ರೆಸ್ ಇಲ್ಲೂ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಹೇಳುವುದಕ್ಕೆ ಉಲ್ಟಾ ಆಗುವುದು ಐತಿಹಾಸಿಕ ಸತ್ಯ.
  • ಬಿಜೆಪಿ ಚುನಾವಣೆ ನಾಯಕತ್ವದ ಕುರಿತು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ವಿಕಾಸವಾದ ಮತ್ತು ರಾಷ್ಟ್ರವಾದದ ಜೊತೆ ನಾವು ನಾವು ಚುನಾವಣೆಗೆ ಹೋಗಲಿದ್ದೇವೆ.
  • ಕಾಂಗ್ರೆಸ್ ಪಕ್ಷದವರು ಏನೇ ಮಾಡಿದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜಾತಿವಾದ, ಪರಿವಾರವಾದ, ಭ್ರಷ್ಟಾಚಾರ, ಓಲೈಕೆ ರಾಜಕೀಯದಿಂದ ದೇಶದ ಒಟ್ಟು ರಾಜಕೀಯ ಪರಿಸ್ಥಿತಿಯೇ ಕಾಂಗ್ರೆಸ್ ಕುಸಿತಕ್ಕೆ ಕಾರಣ. ಈ ನೀತಿಯನ್ನು ಬದಲಿಸಿಕೊಳ್ಳದೆ ಹಳೆ ವೈಭವ ಗಳಿಸುವುದು ಕಷ್ಟದ ಕೆಲಸ. ಚುನಾವಣೆ ಬಂದಾಗಲೆಲ್ಲ ಕಾಂಗ್ರೆಸ್‍ನವರಿಗೆ ದಲಿತ ಸಿಎಂ ನೆನಪಾಗುತ್ತದೆ. ಡಾ. ಪರಮೇಶ್ವರ್ ಸೋಲಿಗೆ ಅವರ ಆಂತರಿಕ ಜಗಳವೇ ಕಾರಣ.
  • ಮೋದಿಯವರ 8 ವರ್ಷಗಳ ಆಡಳಿತ ಕುರಿತು ಸಿದ್ದರಾಮಯ್ಯರು ಬಿಡುಗಡೆ ಮಾಡಿದ ಕಿರುಹೊತ್ತಗೆಯು ಕಾಂಗ್ರೆಸ್‍ಗೆ ಮೋದಿ ಫೋಬಿಯಾ ಹಿಡಿದಿದೆ. ಮೋದಿಯವರು ಏನು ಮಾಡಿದರೂ ವಿರೋಧಿಸುವ ಕಾಯಿಲೆಯಿದೆ ಎಂದು ಸೂಚಿಸುವಂತಿದೆ. ಆದರೆ ಜನರು ಮೋದಿಯವರ ನಾಯಕತ್ವಕ್ಕೆ ಬೆಂಬಲಿಸಿ ಹೆಚ್ಚು ಸೀಟು ಕೊಡುತ್ತಲೇ ಹೋಗಿದ್ದಾರೆ.
  • ಮಹಾರಾಷ್ಟ್ರದಲ್ಲಿ ಜಡತ್ವದ, ಭ್ರಷ್ಟ ಮತ್ತು ಜನವಿರೋಧಿ ಆಡಳಿತದ ಕೊನೆಯಾಗಿದೆ. ದೇಶದ್ರೋಹಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಜೊತೆ ವ್ಯವಹರಿಸಿದ ವ್ಯಕ್ತಿಯೂ ಅಘಾಡಿ ಸರಕಾರದ ಸಂಪುಟದಲ್ಲಿದ್ದರು. ಈಗ ಬಿಜೆಪಿ- ಏಕನಾಥ ಶಿಂಧೆ ನೇತೃತ್ವದ ಸರಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದೆ. ಇದೀಗ ಹೊಸ ರಾಜಕಾರಣ ಆರಂಭವಾಗಿದೆ. ಅಭಿವೃದ್ಧಿ ಯೋಜನೆ ಅನುಷ್ಠಾನ, ರಾಷ್ಟ್ರೀಯವಾದಿ ಚಿಂತನೆಗೆ ಬೆಂಬಲ ನೀಡುವ ಮೂಲಕ ಜನರ ವಿಶ್ವಾಸವನ್ನು ಹೊಸ ಸರಕಾರ ಗೆಲ್ಲಲಿದೆ.
  • ಇನ್ನು ಲೀನಾ ಮಣಿಮೇಕಲೈ ಕಾಳಿ ಚಿತ್ರದಲ್ಲಿ ಕಾಳಿ ದೇವರಿಗೆ ಅಪಮಾನ ಮಾಡಿರುವ ಕುರಿತು ಉತ್ತರಿಸಿದ ಅವರ ಉತ್ತರ ಹೀಗಿದೆ “ನಮ್ಮ ದೇವಾನುದೇವತೆಗಳನ್ನು ಅಪಮಾನಿಸುವ ಕೆಲಸ ಮಾಡುವುದು ಸೂಕ್ತವಲ್ಲ. ನಾವು ಬೇರೆಯವರಂತೆ ರೊಚ್ಚಿಗೇಳಲ್ಲ ಎಂಬುದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ಆ ನಿರ್ಮಾಪಕರು ಮತ್ತು ನಿರ್ದೇಶಕರು ತಕ್ಷಣ ತಮ್ಮ ನಿಲುವನ್ನು ಬದಲಿಸಬೇಕು. ಇಲ್ಲದಿದ್ದರೆ ನಾವು ಕಾನೂನಾತ್ಮಕವಾಗಿ ನಮ್ಮ ಧರ್ಮದ ಪರಂಪರೆ ಉಳಿಸಲು ಹೋರಾಡಲಿದ್ದೇವೆ”

ಬಿಜೆಪಿ ರಾಜ್ಯ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!