ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್‌ ಅಪಮಾನ: ಗೀತಾ ವಿವೇಕಾನಂದ ಆಕ್ರೋಶ

ಹೊಸದಿಗಂತ ವರದಿ, ಬೆಂಗಳೂರು:
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಹೇಳನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಗೌರವಿಸದ ಪಕ್ಷ ಎಂಬುದನ್ನು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಕಿಡಿಕಾರಿದ್ದಾರೆ.
ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಗಳನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿದ್ದಾರೆ. ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಹೇಳಿಕೆಯು ಕಾಂಗ್ರೆಸ್ ಪಕ್ಷವು ಬುಡಕಟ್ಟು ಸಮುದಾಯದ ವಿರೋಧಿ, ದಲಿತ ಮತ್ತು ಮಹಿಳಾ ವಿರೋಧಿ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಗೀತಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗ ಕೂಡ ದಲಿತರು ಮತ್ತು ಆದಿವಾಸಿ ಸಮುದಾಯವನ್ನು ಕಡೆಗಣಿಸಿ ಅವರನ್ನು ಕೇವಲ ಮತಬ್ಯಾಂಕ್ ಆಗಿ ನೋಡುತ್ತಿತ್ತು. ಸಂವಿಧಾನಕ್ಕೆ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿತ್ತು ಎಂದು ಗೀತಾ ವಿವೇಕಾನಂದ ಹೇಳಿದ್ದಾರೆ.
ಬಿಜೆಪಿ ಸರಕಾರಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ರಾಜ್ಯದಲ್ಲೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ಕೊಟ್ಟಿದ್ದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಪರಿಶಿಷ್ಟ ಜಾತಿ, ಪಂಗಡದವರ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಮತಬ್ಯಾಂಕ್ ದೃಷ್ಟಿಯಿಂದ ದಲಿತರ ಬಗ್ಗೆ ಮೊಸಳೆಕಣ್ಣೀರು ಸುರಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!