ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು (ಜುಲೈ18) ಚುನಾವಣೆ ನಡೆಯಲಿದ್ದು ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗಿಂತ ಹೆಚ್ಚು ಬೆಂಬಲ ಹೊಂದಿದ್ದು ಅವರ ಗೆಲುವು ಬಹುತೇಕ ನಿಚ್ಚಳವಾಗಿದೆ.

ಮತಪೆಟ್ಟಿಗೆಗಳು ಈಗಾಗಲೇ ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದು ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದೆ. ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಚುನಾವಣೆಯಲ್ಲಿ ಆಯ್ಕೆಯಾದವರು ಜುಲೈ 25 ರಂದು ಮುಂದಿನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರು ಮತದಾನ ಮಾಡಲಿದ್ದು  ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಬಿಜೆಪಿ, ಅದರ ಮಿತ್ರಪಕ್ಷಗಳು ಮತ್ತು ಹಲವಾರು ಎನ್‌ಡಿಎಯೇತರ ಪಕ್ಷಗಳ ಬೆಂಬಲದೊಂದಿಗೆ, ದ್ರೌಪದಿ ಮುರ್ಮು ಕಣದಲ್ಲಿದ್ದು ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿ(ಎಸ್), ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಜೆಎಂಎಂ ಅವರನ್ನು ಬೆಂಬಲಿಸುವ ಮೂಲಕ ಮುರ್ಮು ಅವರ ಮತಗಳ ಪಾಲು ಸುಮಾರು ಶೇ.60 ತಲುಪುವ ಸಾಧ್ಯತೆ ಇದೆ. ಅವರು ಆಯ್ಕೆಯಾದರೆ ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಲಿದ್ದಾರೆ.

ಮತ್ತೊಂದೆಡೆ, ಯಶವಂತ್ ಸಿನ್ಹಾ ಅವರಿಗೆ ಕಾಂಗ್ರೆಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ, ಸಿಪಿಐ(ಎಂ), ಟಿಆರ್‌ಎಸ್, ಡಿಎಂಕೆ, ಎಐಎಂಐಎಂ, ನ್ಯಾಷನಲ್ ಕಾನ್ಫರೆನ್ಸ್, ಆರ್‌ಎಲ್‌ಡಿ ಮತ್ತು ಇತರ ಕೆಲವು ಸಣ್ಣ ಪಕ್ಷಗಳ ಬೆಂಬಲವಿದೆ. ಆದರೆ, ಗೆಲುವಿನ ದಡ ಸೇರಲು ಬೇಕಾದ ಸಂಖ್ಯಾಬಲದಿಂದ ಅವರು ತೀರಾ ಹಿಂದುಳಿಯಬಹುದು ಎಂಬ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!