October 15, 2026
Thursday, October 15, 2026
spot_img

ಸಾಲಗಾರರ ಒತ್ತಡ: ಮನನೊಂದು ತಾಯಿ-ಇಬ್ಬರು ಮಕ್ಕಳ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಸಮೀಪದ ಕೃಷಿ ಹೊಂಡದಲ್ಲಿ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಬೆಗ್ಲಿಬೆಣಜೇನಹಳ್ಳಿ ನಿವಾಸಿ ಪ್ರಮೀಳ (40), ಪುತ್ರಿ ಸ್ವಪ್ನ (22) ಹಾಗೂ ಪುತ್ರ ಚರಣ್ (18) ಮೃತರು ಎಂದು ಗುರುತಿಸಲಾಗಿದೆ. ಮನೆ ನಿರ್ಮಾಣಕ್ಕಾಗಿ ಪಡೆದಿದ್ದ ಸುಮಾರು 15 ಲಕ್ಷ ಸಾಲದ ಒತ್ತಡವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾಲಗಾರರ ಒತ್ತಡದಿಂದ ಕುಟುಂಬದಲ್ಲಿ ಆತಂಕ

ಕುಟುಂಬವು ಖಾಸಗಿ ಸಾಲದಾರರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಾಲ ಪಡೆದಿದ್ದು, ಮರುಪಾವತಿಗೆ ಸಂಬಂಧಿಸಿದ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಕಾರಣದಿಂದ ಮನೆಯಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಘಟನೆಗೆ ಮುನ್ನ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿರುವ ಮಾಹಿತಿ ಲಭ್ಯವಾಗಿದೆ.

ರಾತ್ರಿ ಮನೆಯಿಂದ ತೆರಳಿದ ತಾಯಿ-ಮಕ್ಕಳು

ಘಟನೆಯ ರಾತ್ರಿ ಪ್ರಮೀಳ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಪತಿ ಸುರೇಶ್ ಅವರು ರಾತ್ರಿಯಿಡೀ ಪತ್ನಿ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದು, ದೂರವಾಣಿ ಮೂಲಕ ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಆತಂಕ ಕಡಿಮೆಯಾಗಿತ್ತು. ಆದರೆ ಬೆಳಿಗ್ಗೆ ಮೂವರೂ ಕೃಷಿ ಹೊಂಡದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಾವಿಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Must Read