ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ದುಬಾರಿ ದುನಿಯಾ ಶುರುವಾಗಿದೆ. ಬೆಲೆ ಏರಿಕೆಗೆ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಬಿಜೆಪಿ ಹೋರಾಟದ ಕಹಳೆ ಮೊಳಗಿಸಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಆರೋಪ ಪಟ್ಟಿ ಬಿಡುಗಡೆ ಮಾಡಿದೆ.
ಸರ್ಕಾರ ಕಳೆದ ಎರಡು ವರ್ಷದಲ್ಲಿ 50 ವಸ್ತುಗಳ ಬೆಲೆಯನ್ನು ಹೆಚ್ಚಿಸಿ ಒಂದು ಕೈಯಲ್ಲಿ ಹಣ ಕೊಟ್ಟು ಇನ್ನೊಂದು ಕೈಯಲ್ಲಿ ಬಡ್ಡಿ ಸಮೇತ ಕಿತ್ತುಕೊಳ್ಳುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿ ಆರೋಪ ಪಟ್ಟಿಯಲ್ಲಿ ಏನಿದೆ?
ಜೂನ್ 24 ರಂದು ಪೆಟ್ರೋಲ್ 3ರೂ ಮತ್ತು ಡೀಸೆಲ್ಗೆ ರೂ 3.50 ಪೈಸೆ ಪ್ರತಿ ಲೀಟರ್ಗೆ ಬೆಲೆ ಏರಿಕೆ ಮಾಡಿದರು.
ಸರ್ಕಾರ ಆದಾಯ ಹೆಚ್ಚಳ ಮಾಡಲು ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದೆ.
ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಹಿಡಿ ಮತ್ತು ಐಹಿಡಿ ಶುಲ್ಕವನ್ನು ಶೇ.10-30ರಷ್ಟು ಹೆಚ್ಚಿಸಿದೆ.
ಜನನ, ಮರಣ ಪ್ರಮಾಣ ಪತ್ರದ ದರವನ್ನು ಶೇಕಡಾ 100ರಷ್ಟು ಹೆಚ್ಚಿಸಿದ್ದಾರೆ. ಈಗ ಮನೆಯಲ್ಲಿ ಸಂಗ್ರಹವಾಗುವ ಕಸದ ಮೇಲೂ ನೂರಾರು ರೂಪಾಯಿ ಸೆಸ್ ವಿಧಿಸಲಾಗಿದೆ.
ಸರ್ಕಾರ ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಆಡುತ್ತಿದ್ದಾರೆ.
ಕೃಷಿ ಭೂಮಿ ಮಾರ್ಗಸೂಚಿ ಮೌಲ್ಯವು ಶೇಕಡಾ 50ರಷ್ಟು ಏರಿಕೆಯಾಗಿದ್ದರೆ, ನಿವೇಶನಗಳ ಹೆಚ್ಚಳವು ಶೇಕಡಾ 30ರಷ್ಟು ಹೆಚ್ಚಾಗಿದೆ.
ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ.
ರೈತರಿಗೆ ಅತ್ಯಾವಶ್ಯಕವಾಗಿ ಬೇಕಾದ ಬಿತ್ತನೆ ಬೀಜದ ಬೆಲೆಯಲ್ಲಿ ಶೇಕಡಾ 50 ರಿಂದ 100 ರಷ್ಟು ಏರಿಕೆಯಾಗಿದೆ.
ಸಾರಿಗೆ ಬಸ್ ದರವನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಸಾರಿಗೆ ಸಂಸ್ಥೆಯು ಸಂಬಳ ನೀಡಲು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.
ವಿದ್ಯುತ್ ಕಾರು ಖರೀದಿಯನ್ನು ಉತ್ತೇಜಿಸುವ ಬದಲು ಶೇಕಡಾ 10ರಷ್ಟು ಜೀವಿತಾವಧಿ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ.
ನಮ್ಮ ಬಡವರ ಪರ ಧ್ವನಿಗೆ ತಲೆಬಾಗಿ ಸರ್ಕಾರ ವಿವೇಕತನವನ್ನು ಪ್ರದರ್ಶಿಸಿ ಆಗಿರುವ ಅನಾಹುತವನ್ನು ಸರಿಪಡಿಸಿಕೊಳ್ಳಲು ಮುಂದಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ.