ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕರಡು ವಿಧೇಯಕ ರಾಜ್ಯಗಳಿಗೆ ಶೀಘ್ರ ರವಾನೆ : ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಆರ್ಥಿಕ ನಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕರಡು ವಿಧೇಯಕ ಸಿದ್ಧವಿದ್ದು, ಸದ್ಯದಲ್ಲೇ ರಾಜ್ಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅವರು ಬೆಂಗಳೂರಿನಲ್ಲಿ ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಸಮ್ಮೇಳನ ಹಾಗೂ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಅನ್ನು ಉದ್ಘಾಟಿಸಿ, ಮಾತನಾಡಿದರು.

ಹಾಲು ಉತ್ಪಾದಕರಿಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪನೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಆಗಿದೆ. ಕರ್ನಾಟಕದಲ್ಲಿ ಸ್ಥಾಪಿತವಾದ ನಂದಿನಿ ಕ್ಷೀರಸಮೃದ್ಧಿ ಸೌಹಾರ್ದ ಸಹಕಾರ ಬ್ಯಾಂಕ್ ಮೂಲಕ ಕೇಂದ್ರ ಸರಕಾರದ ಯೋಜನೆಯಾದ ರೈತರು, ಸಹಕಾರಿಗಳಿಗೆ ಕ್ರೆಡಿಟ್ ಕಾರ್ಡ್ ಕೊಡುವ ಪ್ರಯೋಗ ನಡೆಯಲಿದೆ ಎಂದು ಅಮಿತ್ ಶಾ ತಿಳಿಸಿದರು.

ದೇಶದಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವಾಗಬೇಕೆಂಬ ದಶಕಗಳ ಬೇಡಿಕೆಯನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಹಕಾರಿ ಆಂದೋಲನವನ್ನು ಸಮರ್ಥನೆ ಮಾಡಿಕೊಂಡು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವನ್ನು ನೀಡಿದ್ದಾರೆ. ದೇಶದ ಮೊದಲ ಸಹಕಾರ ಸಚಿವನಾಗುವ ಅವಕಾಶ ನನಗೆ ಸಿಕ್ಕಿದೆ. ಮುಂದಿನ ಆರು ತಿಂಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿನಿ ಯೋಜನೆಗೆ ಮರು ಚಾಲನೆ ನೀಡಿದರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜ್ಯ ಸರಕಾರದ ಸಚಿವರಾದ ಆರ್. ಅಶೋಕ, ಎಸ್.ಟಿ. ಸೋಮಶೇಖರ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಅರಗ ಜ್ಞಾನೇಂದ್ರ, ಆನಂದ ಸಿಂಗ್, ಬಿ.ಸಿ. ಪಾಟೀಲ್, ಶಿವರಾಮ ಹೆಬ್ಬಾರ, ಕೆ. ಗೋಪಾಲಯ್ಯ, ಬೈರತಿ ಬಸವರಾಜ, ಮುರುಗೇಶ ನಿರಾಣಿ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಂತಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!