ಪ್ರಧಾನಿ ಮೋದಿಯಿಂದ ಮಹಿಳೆಯರಿಗೆ ಸಿಕ್ಕಿತು ಸ್ವಾಭಿಮಾನ, ಸ್ವಾವಲಂಬಿ ಬದುಕು: ಮಾಳವಿಕಾ ಅವಿನಾಶ್

ಹೊಸದಿಗಂತ ವರದಿ, ಮೈಸೂರು:

ಕಳೆದ ೧೦ ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳಿಂದಾಗಿ ದೇಶದ ಮಹಿಳೆಯರು ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕುವಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ,  ಚಿತ್ರ ನಟಿ ಮಾಳವಿಕಾ ಅವಿನಾಶ್ ತಿಳಿಸಿದರು.

ಬುಧವಾರ ನಗರದ ಸತ್ಯ ಪ್ರಮೋದ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಆಯೋಜಿಸಲಾಗಿದ್ದ ನಾರಿ ಶಕ್ತಿ ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕವೂ ಮಹಿಳೆಯರು ಶೌಚಾಲಯಕ್ಕಾಗಿ ರಾತ್ರಿತನಕ ಕಾಯುವಂತಹ ಪರಿಸ್ಥಿಯಿತ್ತು. ಅಲ್ಲದೇ ಮನೆಗಳಲ್ಲಿ ಮೂಲ ಭೂತ ಅವಶ್ಯಕವಾದ ಶೌಚಾಲಯವಿಲ್ಲದೆ ಪರದಾಡುತ್ತಿದ್ದರು. ಆದರೆ ಮೋದಿ ಸರ್ಕಾರ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದೆ. ಮಹಿಳೆಯರು ಕಟ್ಟಿಗೆಯಿಂದ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ದಿನಕ್ಕೆ ೫೦೦ ರಿಂದ ೬೦೦ ಸಿಗರೇಟ್ ಸೇದಿದಂತೆ ಹೊಗೆಯನ್ನು ಸೇವಿಸುತ್ತಿದ್ದರು. ಇದು ಅವರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿತ್ತು. ಇದನ್ನು ಮನಗಂಡ ಮೋದಿಯವರು ಮಹಿಳೆಯರಿಗೆಂದು ಉಜ್ವಲ ಯೋಜನೆಯನ್ನು ಜಾರಿಗೆ ತಂದು ದೇಶದಲ್ಲಿ ೧೧ ಕೋಟಿ ಬಡ ಕುಟುಂಬಗಳಿಗೆ, ರಾಜ್ಯದಲ್ಲಿ ೩೯ ಲಕ್ಷ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್, ಸಿಲಿಂಡರ್ ನೀಡಿ, ಅವರನ್ನು ಹೊಗೆಯಿಂದ ಮುಕ್ತರನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಮಹಿಳೆಯರ ಬದುಕು ಇದೀಗ ಸುಧಾರಿಸಿದೆ. ಅಲ್ಲದೇ ಮಹಿಳೆಯರ ಅಭಿವೃದ್ಧಿಗೆಂದು ಮೋದಿಯವರು ಜಾರಿಗೆ ತಂದಿರುವ ಅನೇಕ ಯೋಜನೆಗಳು ಸ್ವಾಭಿಮಾನ, ಸ್ವಾವಲಂಬಿಯಾಗಿ ಬದುಕು ನಡೆಸಲು ಸಹಕಾರಿಯಾಗಿವೆ ಎಂದು ಹೇಳಿದರು.

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ ೫೦ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಇದರ ಪರಿಣಾಮವಾಗಿ ಇದೀಗ ಹೆಚ್ಚಾಗಿ ಮಹಿಳೆಯರು ಅಧಿಕಾರ ನಡೆಸುತ್ತಿರುವುದನ್ನು ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಸ್ಥಾನವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಶೇ ೩೩ ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲು ಧ್ವನಿ ಎತ್ತುತ್ತಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತಾಲಿಬಾನ್ ಸಂಸ್ಕೃತಿಯನ್ನು ಕಾಣುತ್ತಿದ್ದೇವೆ ಎಂದರು.

ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಸಿಗಲೆಂಬ ಉದ್ದೇಶದಿಂದ ಆಯುಸ್ಮಾನ್ ಆರೋಗ್ಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಆರೋಗ್ಯ ವಿಮೆ ಸೌಲಭ್ಯವನ್ನು ಭಾರತ ಹೊರತುಪಡಿಸಿ ಬೇರೆ ಯಾವ ದೇಶವೂ ಜಾರಿಗೆ ತಂದಿಲ್ಲ. ಆಯುಸ್ಮಾನ್ ಯೋಜನೆಯಡಿ ಪ್ರತಿಯೊಬ್ಬರು ೫ ಲಕ್ಷರೂ ತನಕ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ, ಚಾಮರಾಜ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮಹಿಳಾ ಮೋರ್ಚಾದ ಅಧ್ಯಕ್ಷೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!