ಕಾಂಗ್ರೆಸ್ ಕೊಟ್ಟ ಖಾಲಿ ಚೆಂಬನ್ನೇ ಪ್ರಧಾನಿ ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ: ಹೆಚ್.ಡಿ. ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಕಾಂಗ್ರೆಸ್‌ ಶುಕ್ರವಾರ ಚೆಂಬು ಜಾಹೀರಾತು ನೀಡಿತ್ತು. ಆದರೆ, ಈ ಚೆಂಬನ್ನು 2014ರಲ್ಲಿ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಹಸ್ತಾಂತರ ಮಾಡಲಾಗಿತ್ತು. ಮೋದಿಯವರು ಅದನ್ನು ಅಕ್ಷಯಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನಿನ್ನೆ ಈ ರಾಜ್ಯದ ಮುಖ್ಯಮಂತ್ರಿ ಜಾಹೀರಾತು ಕೊಟ್ಟಿದ್ದಾರೆ. ಆದರೆ, ಈ ಚೆಂಬನ್ನು ಯಾರು ಕೊಟ್ಟರು. ಡಾ. ಮನಮೋಹನ್ ಸಿಂಗ್ ಅವರು ಈ ರಾಷ್ಟ್ರವನ್ನು ಆಳ್ವಿಕೆ ಮಾಡಿದರು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದರು. ಆಗ ದೇಶದಲ್ಲಿ ಕೋಲ್‌ಗೇಟ್, 2ಜಿ ಸ್ಪೆಕ್ಟ್ರಂ, ರೈಲ್‌ಗೇಟ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರು. ಆಗ ದೇಶದ ಆರ್ಥಿಕತೆ ಚೆಂಬು ಬರಿದಾಗಿತ್ತು. ಈ ಕಾಂಗ್ರೆಸ್‌ ನಾಯಕರು ಬರಿದಾದ ಚೆಂಬನ್ನು 2014ರಲ್ಲಿ ಕಾಂಗ್ರೆಸ್‌ ನಾಯಕರು ನರೇಂದ್ರ ಮೋದಿಗೆ ಕೊಟ್ಟಿದ್ದಾರೆ. ಆದರೆ, ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ಅವರು ಇದನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದರು.

ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಬಡವರು, ಹರಿಜನರು, ಗಿರಿಜನರು, ಹಿಂದುಳಿದ ವರ್ಗದವರು, ಮಧ್ಯಮ ವರ್ಗದವರು ಹಾಗೂ ಸಣ್ಣ ಸಣ್ಣ ಸಮಾಜದವರನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ. ಅವರ ಬಗ್ಗೆ ಹೇಳುವ ಕ್ಷುಲ್ಲಕ ರಾಜಕಾರಣಿ ಸಿಎಂ, ಡಿಸಿಎಂ ಆಗಿದ್ದಾರೆ. ಇವತ್ತು ಜಾಹೀರಾತಿನಲ್ಲಿ ಬರೀ ಚೊಂಬು ಕೊಟ್ಟಿದ್ದಾರೆ. ಈ ದೇಶದಲ್ಲಿ 34 ಯೋಜನೆಗಳನ್ನು ಕೊಟ್ಟಿದ್ದಾರೆ. ಬಡವರಿಗಾಗಿ, ನಿರುದ್ಯೋಗ ತೊಲಗಿಸಲಿಕ್ಕೆ ಎಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಮಾತನಾಡ್ತಾರೆ ಎಂದು ಟೀಕೆ ಮಾಡಿದರು.

ಎಲ್ಲಾ ವರ್ಗದ ಜನರನ್ನ ಕಾಪಾಡಿದ ಮಹಾನುಭಾವ ಮೋದಿ. ಅವರ ಬಗ್ಗೆ ಇವರು ಮಾತಾಡೋದಾ?. ಮುಖ್ಯಮಂತ್ರಿಗಳೇ, ಡಿಸಿಎಂ ಅವರೇ ಮೋದಿ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡ್ತೀರಾ? ಇವತ್ತು ಜಾಹೀರಾತು ಬರೀ ಚೆಂಬು ಕೊಡ್ತಾರೆ. ನಾಚಿಕೆ ಆಗಬೇಕು‌ ನಿಮಗೆ ಎಂದು ಕಾಂಗ್ರೆಸ್‌ನವರ ವಿರುದ್ಧ ಹೆಚ್‌ಡಿಡಿ ಗುಡುಗಿದರು.

ಈಗ 5 ಗ್ಯಾರಂಟಿ ಕೊಟ್ಟವರು 25 ಗ್ಯಾರಂಟಿ ಕೊಡ್ತಾರಂತೆ. ಕಳೆದ 10 ವರ್ಷದಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲು ಸಾಧ್ಯವಾಗದಂತಹ ಕಾಂಗ್ರೆಸ್‌ನವರು ಈ ದೇಶದಲ್ಲಿ ಅಧಿಕಾರದ ಬಯಕೆ ಪಡುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ವಿಪಕ್ಷ ಸ್ಥಾನ ಪಡೆಯಲು ಯೋಗ್ಯವಲ್ಲದ ಕಾಂಗ್ರೆಸ್‌ 400 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಮೋದಿಗೆ ರಾಜ್ಯದ 28 ಕೋಲಾರ, ಚಿಕ್ಕಬಳ್ಳಾಪುರ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಬೇಕು ಎಂದರು.

ನಾವು ರಾಜ್ಯದ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿದರೆ ಕೃಷ್ಣಾ ನದಿಯಿಂದ, ಕಾವೇರಿಯಿಂದಲಾದರೂ ನೀರು ತರಲಿಕ್ಕೆ ಕೇಳಬಹುದು. ನಾವು ಮೋದಿ ಅವರ ಮುಂದೆ ಹೋಗಿ ಎದೆಯೊಡ್ಡಿ ನಮಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಕೊಡಿ ಎಂದು ನೈತಿಕ ಶಕ್ತಿ ಸಾಮರ್ಥ್ಯ ದೊರೆಯುತ್ತದೆ. ಅದಕ್ಕೆ ನೀವು ಅವಕಾಶ ಮಾಡಿಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!