ಶ್ವೇತಭವನದಲ್ಲಿ ಪ್ರಧಾನಿ ಮೋದಿ: ಸರ್ವರ ಹಿತರಕ್ಷಣೆ -ಸಮಗ್ರ ಕಲ್ಯಾಣ ನಮ್ಮ ಮೂಲಧ್ಯೇಯ ಎಂದ ನಮೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತ ಮತ್ತು ಅಮೆರಿಕದ ಸಮಾಜ ವ್ಯವಸ್ಥೆಗಳು, ಸಂಸ್ಥೆಗಳು ಪ್ರಜಾಸತ್ತಾತ್ಮಕ ಮೌಲ್ಯಾಧಾರಿತವಾದವುಗಳು. ಉಭಯ ರಾಷ್ಟ್ರಗಳ ಸಂವಿಧಾನಗಳು ಮೂರು ಶಬ್ದಗಳಿಂದ ಶುರುವಾಗುತ್ತೆ.ಅದೆಂದರೆ ‘ನಾವು ದೇಶವಾಸಿಗಳು ’(ವಿ ದ ಪೀಪಲ್)ಎಂಬುದಾಗಿ. ವೈವಿಧ್ಯತೆ ಉಭಯ ದೇಶಗಳಿಗೆ ಹೆಮ್ಮೆಯ ವಿಚಾರ. ಎಲ್ಲಾ ಪ್ರಜೆಗಳ ಹಿತಾಸಕ್ತಿ ರಕ್ಷಣೆ ಮತ್ತು ಸಮಗ್ರ ಕಲ್ಯಾಣವೆಂಬ ಮೂಲಭೂತ ಸಿದ್ಧಾಂತದಲ್ಲಿ ನಂಬುಗೆ ಇಟ್ಟವರು ನಾವು. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಂಪನ್ನತೆಗಾಗಿ ಒಟ್ಟಾಗಿ ಶ್ರಮಿಸಲು ಭಾರತ-ಅಮೆರಿಕಗಳು ಕಟಿಬದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಅಮೆರಿಕದ ಶ್ವೇತಭವನದಲ್ಲಿ ನುಡಿದರು.

ಪ್ರಬಲ ಸಾಧನವಾಗಬೇಕು
ಪರಸ್ಪರ ಜನ ಬಾಂಧವ್ಯವು ಭಾರತ-ಅಮೆರಿಕ ಬಾಂಧವ್ಯದ ನೈಜ ಸೂರ್ತಿ ಚೇತನ. ಕೋವಿಡ್ ನಂತರದ ಯುಗದಲ್ಲೀಗ ಜಾಗತಿಕ ಸ್ಥಿತಿಗತಿಗಳು ಹೊಸ ಸ್ವರೂಪ ಪಡೆಯುತ್ತಿವೆ. ಇಡೀ ಜಗತ್ತಿನ ಬಲವರ್ಧನೆಯಲ್ಲಿ ಭಾರತ ಮತ್ತು ಅಮೆರಿಕ ನಡುವಣ ಸ್ನೇಹಾಚಾರ ಪ್ರಬಲ ಸಾಧನವಾಗಬೇಕು ಎಂದು ಆಶಿಸಿದರು ಪ್ರಧಾನಿ ನರೇಂದ್ರ ಮೋದಿ.

ನೀವೇ ನಮ್ಮ ನೈಜ ಬಲ
ಅಮೆರಿಕದಲ್ಲಿನ ಭಾರತೀಯ ಸಮುದಾಯದ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಭಾರತದ ವೈಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸುತ್ತಿದ್ದಾರೆ. ನೀವು ನಮ್ಮ ದ್ವಿಪಕ್ಷೀಯ ಬಾಂಧವ್ಯ ಹಿಂದಿನ ನೈಜ ಬಲ. ಅನಿವಾಸಿ ಭಾರತೀಯರಿಗೆ ಈ ತೆರ ಗೌರವ ಪ್ರದಾನವಾಗಲು ಕಾರಣರಾದ ಅಧ್ಯಕ್ಷ ಬೈಡನ್ ಮತ್ತು ಡಾ. ಜಿಲ್ ಬೈಡನ್‌ರಿಗೆ ಕೃತಜ್ಞತೆಗಳು ಎಂದರು.

ಎತ್ತರೆತ್ತರ ಹಾರಾಡಲಿ
ಭಾರತದ ತ್ರಿವರ್ಣ ಧ್ವಜ ಹಾಗೂ ಅಮೆರಿಕದ ರಾಷ್ಟ್ರಧ್ವಜಗಳು ದಿನೇ ದಿನೇ ಎತ್ತರೆತ್ತರಕ್ಕೆ ಹಾರಾಡಲಿ ಎಂಬುದು ನನ್ನ ಮತ್ತು ಭಾರತದ 1.4 ಬಿಲಿಯನ್ ಜನರ ಪ್ರಾಮಾಣಿಕ ಹಾರೈಕೆ ಎಂದು ನುಡಿದರು.

ತುಂಬು ಕೃತಜ್ಞತೆಗಳು
ಪ್ರಥಮ ಬಾರಿ ಅನಿವಾಸಿ ಭಾರತೀಯರಿಗೆ ಶ್ವೇತಭವನದ ದ್ವಾರಗಳನ್ನು ಇಷ್ಟೊಂದು ವೈಭವೋಪೇತವಾಗಿ ತೆರೆದಿಟ್ಟ ತಮಗೆ ತುಂಬು ಕೃತಜ್ಞತೆಗಳು ಎಂದು ಅಮೆರಿಕ ಅಧ್ಯಕ್ಷರ ಕಚೇರಿಯಲ್ಲಿ ಅಧ್ಯಕ್ಷ ಬೈಡನ್‌ರಲ್ಲಿ ನಮೋ ನುಡಿದರು. ತಾವು ಯಾವತ್ತೂ ಭಾರತದ ಶುಭಾಕಾಂಕ್ಷಿಗಳು ಎಂದೂ ಪ್ರಧಾನಿ ನಮೋ ಬೈಡನ್‌ರಲ್ಲಿ ಹೇಳಿದರು.

3 ದಶಕಗಳ ಹಿಂದೆ ನಾನು ಸಾಧಾರಣ ನಾಗರೀಕನಾಗಿ ಅಮೆರಿಕ ಪ್ರವಾಸ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಶ್ವೇತಭವನವನ್ನು ಹೊರಗಿನಿಂದ ನೋಡಿದ್ದೆ. ಪ್ರಧಾನಿಯಾದ ಬಳಿಕ ನಾನು ಹಲವು ಭಾರಿ ಅಮೆರಿಕಕ್ಕೆ ಆಗಮಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತ-ಅಮೆರಿಕ ಅನಿವಾಸಿ ಭಾರತೀಯ ಸಮುದಾಯಕ್ಕೆ ಶ್ವೇತಭವನದ ಬಾಗಿಲು ತೆರೆದಿದೆ ಎಂದು ಮೋದಿ ಹೇಳಿದರು.

ಮತ್ತೆ ಶ್ವೇತಭವನಕ್ಕೆ ಬರಬೇಕು ನಮೋ
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಶ್ವೇತಭವನಕ್ಕೆ ಆಗಮಿಸಬೇಕು, ಆಗಲೂ ನಮ್ಮ ಹೃತ್ಪೂರ್ವಕ ಸ್ವಾಗತವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನಮ್ಮ ರಾಷ್ಟ್ರದ ಇತಿಹಾಸದುದ್ದಕ್ಕೂ ಅದೇನೇ ಸವಾಲುಗಳನ್ನು ಎದುರಿಸುವ ಸನ್ನಿವೇಶ ಎದುರಾಗಿದ್ದರೂ, ಕಾನೂನಿನಡಿ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ವಿವಿಧತೆಗಳು ನಮ್ಮ ದೇಶವಾಸಿಗಳು ಪಾಲಿಸುವ ಪ್ರಮುಖ ಸಿದ್ಧಾಂತಗಳು. ಬಾಹ್ಯಾಕಾಶ, ಮರೈನ್ ಟೆಕ್ನಾಲಜಿ ಮತ್ತು ಹಸಿರು ತಂತ್ರಜ್ಞಾನ ಸಹಿತ ವ್ಯಾಪಕ ರಂಗಗಳಲ್ಲಿ ನಮ್ಮದು ಪರಸ್ಪರ ಸಹಕಾರದ ನಡೆ ಎಂದು ಜೋ ಬೈಡನ್ ನುಡಿದರು.

ಪಾಲುದಾರಿಕೆ ಅತ್ಯಂತ ದೃಢ
ಕಳೆದ 10 ವರ್ಷಗಳಲ್ಲಿ ಭಾರತದೊಂದಿಗಿನ ಅಮೆರಿಕದ ಒಂದು ಸಣ್ಣ ಹೆಜ್ಜೆಯೂ ಭಾರೀ ಪ್ರಗತಿಯಾಗಿ ಮಾರ್ಪಾಡಾಗಿದೆ. ಉಭಯ ರಾಷ್ಟ್ರಗಳ ನಡುವಣ ಪಾಲುದಾರಿಕೆ ಕೂಡ ಹಿಂದೆಂದು ಕಂಡರಿಯದ ತೆರ ಅತ್ಯಂತ ದೃಢವಾಗಿದೆ ಎಂದು ದ್ವಿಪಕ್ಷೀಯ ಮಾತುಕತೆ ಸಂದರ್ಭ ಬೈಡನ್ ಪ್ರಧಾನಿ ನಮೋ ಅವರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!