ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ.
ಈ ಅಧಿವೇಶನವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯನಿರ್ವಹಿಸಲಿದ್ದು, ಸುಮಾರು 40 ವರ್ಷಗಳ ನಂತರ ಭಾರತವು ಎರಡನೇ ಬಾರಿ ಆಯೋಜಿಸುತ್ತಿರುವ ಸಭೆ ಇದಾಗಿದೆ. ಒಲಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಐಒಸಿ ಅಧಿವೇಶನಗಳಲ್ಲಿ ತೆಗೆದುಕೊಳ್ಳಲಾಗುತ್ತದೆ.
141ನೇ ಐಒಸಿ ಅಧಿವೇಶನವು ಜಾಗತಿಕ ಸಹಕಾರವನ್ನು ಉತ್ತೇಜಿಸಲು, ಕ್ರೀಡಾ ಉತ್ಕೃಷ್ಟತೆಯನ್ನು ಆಚರಿಸಲು ಮತ್ತು ಶ್ರೇಷ್ಠತೆಯ ಒಲಿಂಪಿಕ್ ಆದರ್ಶಗಳನ್ನು ಮುಂದುವರಿಸಲು ರಾಷ್ಟ್ರದ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ಕ್ರೀಡೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಂವಹನ ಮತ್ತು ಜ್ಞಾನ ಹಂಚಿಕೆಗೆ ಇದು ಅವಕಾಶವನ್ನು ಒದಗಿಸುತ್ತದೆ. ಈ ಅಧಿವೇಶನದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಮತ್ತು ನೀತಾ ಅಂಬಾನಿ ಸೇರಿದಂತೆ ಐಒಸಿಯ ಇತರ ಸದಸ್ಯರು, ಪ್ರಮುಖ ಭಾರತೀಯ ಕ್ರೀಡಾ ಪಟುಗಳು ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸೇರಿದಂತೆ ವಿವಿಧ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.