Friday, November 28, 2025

ಪ್ರಧಾನಿ ಮೋದಿಯಿಂದ ಬಂಗಾರದ ತೀರ್ಥ ಮಂಟಪ ಉದ್ಘಾಟನೆ, ಉಡುಪಿಯಲ್ಲಿಂದು ಏನೆಲ್ಲಾ ಕಾರ್ಯಕ್ರಮ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡಲಿದ್ದಾರೆ. ಕೃಷ್ಣ ಮಠಕ್ಕೆ ಭೇಟಿ ಕೊಟ್ಟ ನಂತರ ಲಕ್ಷ್ಯಕಂಠ ಗೀತಾ ಪಠಣ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 25,000 ಜನ ಕುಳಿತುಕೊಳ್ಳುವ ಸುಸಜ್ಜಿತ ಪೆಂಡಾಲನ್ನು ಸಿದ್ಧ ಮಾಡಲಾಗಿದೆ.

ವಿಐಪಿ ಭಗವದ್ಗೀತೆ ಪಠಣ ಮಾಡುವವರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯನ್ನ ಸಂಪೂರ್ಣವಾಗಿ ಹವಾನಿಯಂತ್ರಿತ ಮಾಡಲಾಗಿದೆ. ಪೆಂಡಾಲಿಗೆ 5 ಬೃಹತ್ ಫ್ಯಾನುಗಳನ್ನ ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನ ಮಠವೇ ಮಾಡಿದ್ದು, ನೀರಿನ ಬ್ಯಾಗ್, ಬಾಟಲ್, ತಿಂಡಿ ತಿನಿಸು, ತರುವಂತಿಲ್ಲ. ಸಮಾವೇಶದ ನಂತರ ಒಂದು ಲಕ್ಷ ಜನಕ್ಕೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಕಲಾವಿದರು ಕೈಚಳಕ ಮೆರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ವಿಶೇಷ ಮರಳಿನ ಕಲಾಕೃತಿ ರಚನೆ ಮಾಡಲಾಗಿದೆ. ಸ್ಯಾಂಡ್ ಥೀಮ್ ಕಲಾವಿದರಿಂದ ಮರಳು ಶಿಲ್ಪ ರಚಿಸಿದ್ದು, ಕಡೆಗೋಲು ಕೃಷ್ಣನ ಜೊತೆ ಪ್ರಧಾನಿ ನರೇಂದ್ರ ಮೋದಿಯ ಚಿತ್ರ ರಚಿಸಲಾಗಿದೆ. ಮರಳಿನ ಚಿತ್ರಕ್ಕೆ ಬಣ್ಣವನ್ನ ಕೊಡಲಾಗಿದೆ. ಕಲಾವಿದ ಹರೀಶ್ ಸಾಗ ಮತ್ತು ತಂಡದವರಿಂದ ದಿನವಿಡೀ ಪರಿಶ್ರಮ ಪಟ್ಟು ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವ ಸಂದರ್ಭ ಬಂಗಾರದ ತೀರ್ಥ ಮಂಟಪ ಉದ್ಘಾಟನೆ ಮಾಡಲಿದ್ದಾರೆ. ಕೃಷ್ಣಮಠದ ಗರ್ಭಗುಡಿಯ ಹೊರ ಭಾಗದಲ್ಲಿರುವ ತೀರ್ಥ ಮಂಟಪವನ್ನ ಸಂಪೂರ್ಣವಾಗಿ ಬಂಗಾರದಿಂದ ಮುಚ್ಚಲಾಗಿದೆ. 4 ಕಂಬಗಳು ಮೇಲ್ಚಾವಣಿಗೆ ಬಂಗಾರ ಹಾಸಲಾಗಿದೆ. ಶಂಖ ಚಕ್ರ ಗಧಾ ಪದ್ಮ ಗಜಪಕ್ಷಿ ಅಲಂಕಾರ ರಚಿಸಲಾಗಿದೆ. ತಮಿಳುನಾಡಿನ ಉದ್ಯಮಿ ರವಿ ಶ್ಯಾಮ್, ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ 50ನೇ ವರ್ಷದ ಸನ್ಯಾಸ ದೀಕ್ಷೆ ಹಿನ್ನೆಲೆಯಲ್ಲಿ ಈ ಸೇವೆಯನ್ನು ನೀಡುತ್ತಿದ್ದಾರೆ.

ಉಡುಪಿಯಲ್ಲಿಂದು ಮೋದಿ ಕಾರ್ಯಕ್ರಮ ಏನೇನು?
ಬೆಳಗ್ಗೆ 8ಕ್ಕೆ ದೆಹಲಿಯಿಂದ ಹೊರಡಲಿರುವ ಪ್ರಧಾನಿ ಮೋದಿ
ಬೆ.11:05ಕ್ಕೆ – ಮಂಗಳೂರು ಏರ್‌ಪೋರ್ಟ್‌ಗೆ ಮೋದಿ ಆಗಮನ
ಬೆ.11:35 – ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಹೆಲಿಪ್ಯಾಡ್‌ಗೆ ಆಗಮನ
ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ
ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ
ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ
ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ
ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ
ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ
ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ
ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ
ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ
ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ
ಬಳಿಕ ಪ್ರಧಾನಿ ಮೋದಿ ಭಾಷಣ

error: Content is protected !!