ಶಿರಡಿ ಸಾಯಿಬಾಬಾಗೆ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರದ ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ಸಾಯಿಬಾಬಾ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದರು.

ಶಿರಡಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಕ್ತರ ಸಾಲು ಹಾದಿಯ ಉದ್ಘಾಟನೆ, ನಿಲವಂದೆ ಅಣೆಕಟ್ಟೆಯಲ್ಲಿ ಜಲಪೂಜೆ ಮತ್ತು ಅಣೆಕಟ್ಟೆಯ ಕಾಲುವೆಯ ಜಾಲದ ಲೋಕಾರ್ಪಣೆ ಸೇರಿದಂತೆ ಆರೋಗ್ಯ, ರೈಲು, ರಸ್ತೆ, ತೈಲ ಮತ್ತು ಅನಿಲದಂತಹ ವಲಯಗಳಲ್ಲಿ ಸುಮಾರು 7,500 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡುವರು.

ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿರುವ ಶಿರಡಿಯ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಭಕ್ತರ ದರ್ಶನ ಹಾದಿಗೆ 109 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದು ಹವಾನಿಯಂತ್ರಿತವಾಗಿದ್ದು, ಮೂರು ಸ್ಥರದಲ್ಲಿ ನಿರ್ಮಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆ ದೇಶ ವಿದೇಶಗಳ ಭಕ್ತರು ಪ್ರತ್ಯೇಕವಾಗಿ ಸುರಕ್ಷಿತವಾಗಿ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಲಿದೆ. 2018ರಲ್ಲಿ ಈ ಯೋಜನೆಗೆ ಮೋದಿ ಅಡಿಗಲ್ಲು ಹಾಕಿದ್ದರು. ಯೋಜನೆಯು ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡಿದ್ದು, ಅವರೇ ಉದ್ಘಾಟಿಸಲಿದ್ದಾರೆ.

ಅಹಮದ್‌ನಗರ ಜಿಲ್ಲೆಯ ಅಕೋಲೆ ತಾಲೂಕಿನ ನಿಲವಂದೆ ಅಣೆಕಟ್ಟು ಯೋಜನೆಯು ಬರ ಮತ್ತು ಕೃಷಿಯೋಗ್ಯ ಪ್ರದೇಶಗಳನ್ನು ಸುಧಾರಿಸುವುದಾಗಿದೆ. ಅಕೋಲೆ, ಸಂಗಮನೇರ್, ರಹತ, ಶ್ರೀರಾಂಪುರ, ಕೋಪರಗಾಂವ್ ಮತ್ತು ನಾಸಿಕ್ ತಾಲೂಕಿನ 182 ಗ್ರಾಮಗಳ 68,878 ಹೆಕ್ಟೇರ್ (1 ಲಕ್ಷದ 70 ಸಾವಿರದ 200 ಎಕರೆ) ಕೃಷಿ ಭೂಮಿಯ ಎಡ, ಬಲ ದಂಡೆಗೆ ನೀರಾವರಿ ಒದಗಿಸುವುದಾಗಿದೆ.

ಇದರೊಂದಿಗೆ ಪ್ರಧಾನಿ, ಅಹಮದ್‌ನಗರದ ಆಯುಷ್ ಆಸ್ಪತ್ರೆ ಉದ್ಘಾಟನೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಭೂಮಿಪೂಜೆ, ಶಿರಸಿ ವಿಮಾನ ನಿಲ್ದಾಣದ ಬಳಿಯ ನೂತನ ಟರ್ಮಿನಲ್ ಕಟ್ಟಡದ ಭೂಮಿಪೂಜೆ, ಕುರ್ದುವಾಡಿ-ಲಾತೂರ್ ರಸ್ತೆ ರೈಲ್ವೆ ವಿಭಾಗ (186 ಕಿಮೀ), ಜಲಗಾಂವ್‌ನಿಂದ ಭೂಸಾವಲ್‌ಗೆ ಸಂಪರ್ಕಿಸುವ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ (24.46 ಕಿಮೀ), ಎನ್‌ಎಚ್-166ರಲ್ಲಿ ಸಾಂಗ್ಲಿಯಿಂದ ನಾಲ್ಕು ಪಥದ ರಸ್ತೆ ವಿಸ್ತರಣೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮನ್ಮಾಡ್ ಟರ್ಮಿನಲ್ ವಿದ್ಯುದ್ದೀಕರಣ, ಹೆಚ್ಚುವರಿ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!