ಪ್ರಧಾನಿ ಮೋದಿ ಬೃಹತ್‌ ರೋಡ್​ ಶೋ ಮುಕ್ತಾಯ: ಹೇಗಿತ್ತು ಆ 160 ನಿಮಿಷಗಳ ರ್‍ಯಾಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದೆಲ್ಲೆಡೆ ಪ್ರಧಾನಿಯವರ ಮತಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಇಂದು ಬೆಂಗಳೂರಿನಲ್ಲಿ ನಡೆದ ಮೊದಲ ದಿನದ ಬೃಹತ್ ರೋಡ್‌ ಶೋ ಅಂತ್ಯವಾಗಿದೆ. ಸುಮಾರು 2 ಗಂಟೆ 40 ನಿಮಿಷಗಳ ಕಾಲ ನಡೆದ ರೋಡ್‌ ಶೋಗೆ ಜನ ಅಭೂತ್‌ಪೂರ್ವ ಬೆಂಬಲ ವ್ಯಕ್ತಪಡಿಸಿದರು. ಸುಮಾರು 26.5 ಕಿಮೀ ಅಂತರವನ್ನು ಕ್ರಮಿಸಿದ ಮೋದಿ ಈ ರೋಡ್‌ ಶೋನಲ್ಲಿ 13 ವಿಧಾನಸಭಾ ಕ್ಷೇತ್ರಗಳನ್ನು ಕವರ್‌ ಮಾಡಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ.

ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಭವನದಿಂದ ಆರಂಭವಾದ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯಗೊಂಡಿತು. ಮೋದಿ ರೋಡ್‌ ಶೋ ಸಾಗಿದ ದಾರಿಯುದ್ದಕ್ಕೂ ಜನ ಅದ್ಧೂರಿ ಸ್ವಾಗತವನ್ನು ಕೋರಿದರು. ಈ ವೇಳೆ ಹೂವಿನ ಸುರಿಮಳೆ ಜೊತೆಗೆ ಮೋದಿ ಘೋಷಣೆಗಳು ಕೇಳಿಬಂದವು. ರೋಡ್‌ ಶೋದುದ್ದಕ್ಕೂ ಮೋದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್‌ ಸಾಥ್‌ ನೀಡಿದರು.

ಶ್ರೀ ಸೋಮೇಶ್ವರ ಸಭಾ ಭವನದಿಂದ ರೋಡ್‌ ಶೋ ಪ್ರಾರಂಭವಾಗಿದ್ದು, ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ರೋಡ್‌ ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಚೌಕ, ನವರಂಗ್‌ ಸರ್ಕಲ್‌, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಮೂಲಕ ಸಾಗಿ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ರೋಡ್‌ ಶೋ ಮುಕ್ತಾಯವಾಯಿತು.

ಮೊದಲು ನಿಧಾನವಾಗಿಯೇ ಸಾಗಿದ ರೋಡ್‌ ಶೋ ಅಂತ್ಯದಲ್ಲಿ ವಿಜಯನಗರ ದಾಟುತ್ತಲೇ ವೇಗ ಪಡೆದುಕೊಂಡಿತು. ಬಸವೇಶ್ವರ ನಗರ, ಶಂಕರಮಠ, ನವರಂಗ ಸರ್ಕಲ್‌, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರದಲ್ಲಿ ರೋಡ್‌ ಶೋ ವೇಗವಾಗಿ ಸಾಗಿದ್ದು, ಮೋದಿ ಅಭಿಮಾನಿಗಳಲ್ಲಿ ಬೇಸರ ಮೂಡಿದಂತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!