ಮಹಾಕುಂಭದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ: ಹಲವು ಗಣ್ಯರ ಭಾಗಿ, ಬಿಗಿ ಭದ್ರತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಮಹಾ ಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 27 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಳದಲ್ಲಿ ಭಾಗವಹಿಸಲಿದ್ದು, ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಗಂಗಾ ಪೂಜೆ ನೆರವೇರಿಸಲಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಫೆಬ್ರವರಿ 1 ರಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಈ ಮಧ್ಯೆ ರಾಷ್ಟ್ರಪತಿ ದ್ರೌಪದಿ ಮುರ್ಮು ಫೆಬ್ರವರಿ 10 ರಂದು ಪ್ರಯಾಗರಾಜ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಯಕರ ಸುಗಮ ಭೇಟಿಗಾಗಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ.

ಇಂದು ಬೆಳಗ್ಗೆ ಕೊರೆಯುವ ಚಳಿ, ದಟ್ಟವಾದ ಮಂಜನ್ನು ಲೆಕ್ಕಿಸದೆ ಅಪಾರವಾದ ಸಂಖ್ಯೆಯಲ್ಲಿ ಭಕ್ತರು ಮಹಾ ಕುಂಭ ಮೇಳದಲ್ಲಿ ಜಮಾಯಿಸಿದ್ದರು. ಪ್ರತಿಕೂಲ ಹವಾಮಾನ ಭಕ್ತರ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣಲಿಲ್ಲ. ಮುಂದೆ ಪ್ರಮುಖ ನಾಲ್ಕು ಶಾಹಿ ಸ್ನಾನಗಳಿದ್ದು, ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಮಹಾಕುಂಭ ಮೇಳದ ಒಂಬತ್ತನೇ ದಿನದಂದು 15. 97 ಮಿಲಿಯನ್‌ಗಿಂತಲೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!