2 ದಿನಗಳ ಕಾಲ ಮೋದಿ ರಾಜ್ಯ ಪ್ರವಾಸ: ಪ್ರಧಾನಿ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನಿಂದ (ಜೂನ್-‌20) ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಕೈಗೊಂಡಿದ್ದು, ಸುಮಾರು 27,000 ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರಿನ ವಿವಿಧ ರಸ್ತೆಗಳ ಮೂಲಸೌಕರ್ಯ ಮತ್ತು ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಮೋದಿ ಭೇಟಿ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮೋದಿ ಸಂಚರಿಸುವ ರಸ್ತೆಗಳಲ್ಲಿ ಈಗಾಗಲೇ ವಾಹನ ಸಂಚಾರಕ್ಕೆ ಬ್ರೇಕ್‌ ಬಿದ್ದಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಸೋಮವಾರ ಮಧ್ಯಾಹ್ನ 12:30 ರ ಸುಮಾರಿಗೆ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು (CBR) ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಕಾರ್ಯಕ್ರಮದ ಭಾಗವಾಗಿ 832 ಹಾಸಿಗೆಗಳ ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗಳೂರಿನಲ್ಲಿ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (BSRP) ಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಲಿದ್ದಾರೆ. 15,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು ಒಟ್ಟು 148 ಕಿಮೀ ಉದ್ದದ 4 ಕಾರಿಡಾರ್‌ಗಳನ್ನು ಹೊಂದಿದೆ. ಯಶವಂತಪುರ ಜಂಕ್ಷನ್ ರೈಲು ನಿಲ್ದಾಣವನ್ನು ಕ್ರಮವಾಗಿ ಸುಮಾರು 500 ಕೋಟಿ ಮತ್ತು 375 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಮಧ್ಯಾಹ್ನ 1:45 ರ ಸುಮಾರಿಗೆ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ (ಬೇಸ್) ನೂತನ ಕ್ಯಾಂಪಸ್‌ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೆ, ಉನ್ನತೀಕರಿಸಿದ 150 ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಧ್ಯಾಹ್ನ 2:45ಕ್ಕೆ ಕೊಮ್ಮಘಟ್ಟದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೈಯ್ಯಪ್ಪನಹಳ್ಳಿಯ ಹವಾನಿಯಂತ್ರಿತ ರೈಲು ನಿಲ್ದಾಣ ಉದ್ಘಾಟಿಸುವರು. ಜೊತೆಗೆ ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆ ಮತ್ತು 6ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು ಲಾಜಿಸ್ಟಿಕ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ನಂತರ ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಪ್ರಧಾನಿ, ನಾಗನಹಳ್ಳಿ ಮತ್ತು ಮೈಸೂರಿನಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಹೊಸ ಕೋಚಿಂಗ್‌ ಸಂಕೀರ್ಣಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದು, ಸಂಜೆ 7.45ಕ್ಕೆ ಮೈಸೂರಿನ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.

ಜೂನ್ 21 ರಂದು, ಎಂಟನೇ ಅಂತರಾಷ್ಟ್ರೀಯ ಯೋಗ ದಿನದ (IDY)ಅಂಗವಾಗಿ ಪ್ರಧಾನಮಂತ್ರಿ ಮೈಸೂರಿನ ಅರಮನೆ ಮೈದಾನದಲ್ಲಿ ಬೆಳಿಗ್ಗೆ 6:30 ಕ್ಕೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಾವಿರಾರು ಜನರೊಂದಿಗೆ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!