ರಾಷ್ಟ್ರೀಯ ಲಾಜಿಸ್ಟಿಕ್ ಪಾಲಿಸಿ ಅನಾವರಣಗೊಳಿಸಿದ ಪ್ರಧಾನಿ: ಚೀತಾದ ವೇಗ ಇರಲಿ ಎಂದ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಾರಿಗೆ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ , ಉದ್ಯಮ ರಂಗ ಮತ್ತು ನಾಗರಿಕರಿಗೆ ಸಮಯ -ಹಣ ಉಳಿಸುವ ಹಾಗೂ ಸರಕನ್ನು ಇನ್ನಷ್ಟು ತ್ವರಿತ ಸಮಯದಲ್ಲಿ ತಲುಪಿಸುವಲ್ಲಿ ನೆರವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ (ರಾಷ್ಟ್ರೀಯ ಸರಕು ಸಾಗಣೆ ಮತ್ತು ಸರಬರಾಜು ವ್ಯವಸ್ಥೆ)ನೀತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಅನಾವರಣಗೊಳಿಸಿದರು. ಇದರಿಂದ ಇಂಧನ ವೆಚ್ಚ ಮತ್ತು ಸರಕು ಸಾಗಣೆ ಮತ್ತು ಸರಬರಾಜು ವೆಚ್ಚವನ್ನು ತಗ್ಗಿಸಲು ನೆರವಾಗಲಿದೆ ಎಂದು ಅವರು ಒತ್ತಿ ಹೇಳಿದರು .

ಇದರಿಂದಾಗಿ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಸರಕು ಸಾಗಣೆ ನೌಕೆಗಳ ಸಮಯ ಈ ಹಿಂದಿದ್ದ 44 ಗಂಟೆಗಳನ್ನು 26 ಗಂಟೆಗಳಿಗೆ ಇಳಿಸುವಲ್ಲಿ ನೆರವಾಗಲಿದೆ.ಸಾಗರಮಾಲಾ ಯೋಜನೆಯಡಿ ದೇಶದ ಬಂದರುಗಳನ್ನು ಜೋಡಿಸಲಾಗುತ್ತಿದ್ದು,ಸರಕು ಸಾಗಣೆ ಕಾರಿಡಾರ್‌ಗಳನ್ನು ನಿರ್ಮಿಸಿ ಲಾಜಿಸ್ಟಿಕ್ ಕನೆಕ್ಟಿವಿಟಿಯನ್ನು ಸುಧಾರಿಸಿ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

2.2 ಕೋಟಿ ಜನರಿಗೆ ಬದುಕು
ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನುಮದಿನದ ಅಂಗವಾಗಿ ಈ ನೂತನ ಲಾಜಿಸ್ಟಿಕ್ ನೀತಿಯನ್ನು ಘೋಷಿಸಲಾಗಿದ್ದು, 2.2ಕೋಟಿ ಜನರಿಗೆ ಬದುಕು ನೀಡುವ ಈ ಕ್ಷೇತ್ರವನ್ನು ಇನ್ನಷ್ಟು ದಕ್ಷಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿ ನೆರವಾಗಲಿದೆ. ವಸ್ತುಗಳ ಸಾಗಣೆ ಮತ್ತು ಸರಬರಾಜು ವೆಚ್ಚದಲ್ಲಿ ಶೇ.10 ರಷ್ಟನ್ನು ಕಡಿಮೆ ಮಾಡುವ ಉದ್ದೇಶದ ಈ ಯೋಜನೆ ವಸ್ತುಗಳ ಸಾಗಣೆ ಮತ್ತು ಪೂರೈಕೆ ವೆಚ್ಚವನ್ನು ತಗ್ಗಿಸಲಿರುವುದರಿಂದ ಗ್ರಾಹಕರಿಗೂ ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ನೀಡಲು ಅನುಕೂಲವಾಗಲಿದೆ.ಹಾಗೆಯೇ ದೇಶದ ರಫ್ತನ್ನು ಶೇ.5 ರಿಂದ 8 ರಷ್ಟು ಹೆಚ್ಚಿಸಲೂ ಇದು ಬಲ ನೀಡಲಿದೆ.

ಭಾರತವೀಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಮೂಡಿಬಂದಿದ್ದು, ಜೊತೆಯಲ್ಲೇ ವಿಶ್ವದ ಉತ್ಪಾದನಾ ಹಬ್ ಆಗಿಯೂ ಮೂಡಿಬರುತ್ತಿದೆ. ಸ್ವದೇಶಿ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ಮತ್ತು ಬಲ ನೀಡುವುದಕ್ಕಾಗಿ ಕೇಂದ್ರ ಸರಕಾರ ಪ್ರಕಟಿಸಿರುವ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ)ವನ್ನು ವಿಶ್ವ ಸ್ವೀಕರಿಸಿದೆ ಎಂಬುದರತ್ತ ಅವರು ಬೊಟ್ಟು ಮಾಡಿದರು .

ಲಾಜಿಸ್ಟಿಕ್ ಕ್ಷೇತ್ರವನ್ನು ಬಲಗೊಳಿಸುವುದಕ್ಕಾಗಿ ಸರಕಾರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಲಾಜಿಸ್ಟಿಕ್ ರಂಗದಲ್ಲಿ ಇನ್ನಷ್ಟು ದಕ್ಷತೆ ತರುವ ನಿಟ್ಟಿನಲ್ಲಿ ಕಸ್ಟಮ್ಸ್‌ನಲ್ಲಿ ಫೇಸ್‌ಲೆಸ್ ಅಸೆಸ್‌ಮೆಂಟ್ ಮತ್ತು ಇ-ವೇ ಬಿಲ್ ಹಾಗೂ ಫಾಸ್ಟ್ಯಾಗ್‌ಗಳನ್ನು ತರಲಾಗಿದೆ . ಭಾರತೀಯ ಉತ್ಪನ್ನಗಳು ವಿಶ್ವದ ಮಾರುಕಟ್ಟೆಗಳ ಹಿಡಿತ ಸಾಸುವಂತಾಗಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ದೇಶ ಬಲಗೊಳಿಸಬೇಕಿದ್ದು, “ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ”ಯು ಈ ಉತ್ತೇಜನ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ನೆರವಾಗಲಿದೆ ಎಂದು ಅವರು ವಿವರಿಸಿದರು .ಸರಕು ಸಾಗಣೆ ಮತ್ತು ಪೂರೈಕೆ ವ್ಯವಸ್ಥೆ ಹೇಗಿರಬೇಕೆಂದರೆ ಚೀತಾದ ಓಟದಂತಹ ವೇಗ ಹೊಂದಿರಬೇಕು ಎಂದು ಅವರು ಕರೆಯಿತ್ತರು.

ಏನಿದು ಲಾಜಿಸ್ಟಿಕ್ ?
ಲಾಜಿಸ್ಟಿಕ್ಸ್ ಎಂದರೆ ಸರಕು ಸಾಗಣೆ ಮತ್ತು ಸರಬರಾಜು ವ್ಯವಸ್ಥೆಯಾಗಿದೆ. ಭಾರತದಲ್ಲಿ ಈ ಸರಬರಾಜು ವ್ಯವಸ್ಥೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ಒಂದು ಉತ್ಪನ್ನ ತನ್ನ ಉದ್ದೇಶಿತ ಸ್ಥಳ ತಲುಪಲು ಬಹಳ ವೆಚ್ಚ ಮತ್ತು ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದು ಅಂದಾಜಿನಂತೆ ಭಾರತದಲ್ಲಿ ಜಿಡಿಪಿಯ ಶೇ. 13-14 ರಷ್ಟು ಹಣ ಲಾಜಿಸ್ಟಿಕ್ಸ್‌ಗೆಯೇ ವ್ಯಯವಾಗಿ ಹೋಗುತ್ತಿದೆ ಎನ್ನಲಾಗಿದೆ. ಜರ್ಮನಿ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಉತ್ತಮ ಲಾಜಿಸ್ಟಿಕ್ಸ್ ವ್ಯವಸ್ಥೆ ಇದೆ. ಅಲ್ಲಿ ಲಾಜಿಸ್ಟಿಕ್ಸ್‌ಗಾಗಿ ವೆಚ್ಚವಾಗುವುದು ಜಿಡಿಪಿಯ ಶೇ. 8-9 ಮಾತ್ರ. ಮುಂದಿನ 5 ವರ್ಷಗಳಲ್ಲಿ ಸರಕು ಸಾಗಣೆ ಮತ್ತು ಸರಬರಾಜು ವೆಚ್ಚವನ್ನು ಶೇ.10 ರಷ್ಟು ಕಡಿಮೆ ಮಾಡುವುದು ಸರಕಾರದ ಗುರಿಯಾಗಿದೆ ಎಂದರು.

ಇನ್ನಷ್ಟು ಬಲ ನೀಡಬಲ್ಲ ಡ್ರೋನ್ ವ್ಯವಸ್ಥೆ
ಡೆಮಾಕ್ರೆಟಿಕ್ ಸೂಪರ್‌ಪವರ್ ಆಗಿ ಮೂಡಿಬರುತ್ತಿರುವ ಭಾರತಕ್ಕೆ ಅಸಾಮಾನ್ಯ ಬುದ್ಧಿಮತ್ತೆಯ ವ್ಯವಸ್ಥೆಯೊಂದು ಇನ್ನಷ್ಟು ಬಲ ನೀಡಲಿದೆ.ಈಗಾಗಲೇ ತಜ್ಞರು ಭಾರತದ ನಿರ್ಧಾರ ಮತ್ತು ಪ್ರಗತಿಯನ್ನು ಶ್ಲಾಘಿಸಿದ್ದಾರೆ. ದೇಶದಲ್ಲಿನ ಡ್ರೋನ್ ನೀತಿಯ ಬಗ್ಗೆ ಪ್ರಸ್ತಾವಿಸಿದ ಅವರು, ಲಾಜಿಸ್ಟಿಕ್ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸಲು ಡ್ರೋನ್ ನೀತಿಯು ನೆರವಾಗಬಲ್ಲದು ಎಂದರು.

2 ವರ್ಷಗಳ ಕೋವಿಡ್ ಸಂಕಟದ ಬಳಿಕ ವೇಗದ ಬೆಳವಣಿಗೆಯನ್ನು ಸಾಸುವ ನಿಟ್ಟಿನಲ್ಲಿ ಈಗ ನಿಯಮಗಳು ಮತ್ತು ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸಲು ಸೂಕ್ತ ನೀತಿಗಳ ಅಗತ್ಯವಿದೆ. 2019 ರಲ್ಲೇ ಕೇಂದ್ರ ವಾಣಿಜ್ಯ ಸಚಿವಾಲಯವು ಈ ನೀತಿಯನ್ನು ಸಿದ್ಧಪಡಿಸಿತ್ತಾದರೂ ಕೋವಿಡ್ ಕಾರಣದಿಂದ ಇಷ್ಟು ವಿಳಂಬವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!