ಪ್ರಧಾನಿ ಭದ್ರತಾ ವೈಫಲ್ಯ ಪ್ರಕರಣ: ಫಿರೋಜ್‌ಪುರ ಪೋಲೀಸ್‌ ವರಿಷ್ಠಾಧಿಕಾರಿಯನ್ನು ದೋಷಿಯನ್ನಾಗಿಸಿದ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನವರಿಯಲ್ಲಿ ಪಂಜಾಬ್‌ನ ಫಿರೋಜ್‌ಪುರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಭದ್ರತಾ ಲೋಪ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಅಂದಿನ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ದೀಪ್ ಭನ್ಸ್ ಅವರನ್ನು ದೋಷಿಯನ್ನಾಗಿಸಲಾಗಿದೆ.

ಸಾಕಷ್ಟು ಸಮಯ ಮತ್ತು ಪಡೆಗಳು ಲಭ್ಯವಿದ್ದರೂ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವರು ವಿಫಲರಾಗಿದ್ದಾರೆ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ. ವರದಿಯನ್ನು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಗೆ ಕಳುಹಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಹಾಗೂ ಈ ವಿಷಯವನ್ನು ಇಲ್ಲಿಗೇ ಮುಚ್ಚಲಾಗಿದೆ ಎಂದಿದೆ.

ಘಟನೆಯ ಹಿನ್ನೆಲೆ:
ಪಂಜಾಬ್ ವಿಧಾನಸಭಾ ಚುನಾವಣೆಗೆ ಮೊದಲು 42,750 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಜನವರಿ 5 ರಂದು ಫಿರೋಜ್‌ಪುರಕ್ಕೆ ಭೇಟಿ ನೀಡಬೇಕಿತ್ತು.

ಮೋದಿ ಅವರು ಪಂಜಾಬ್‌ನ ಬಟಿಂಡಾದಲ್ಲಿ ಬಂದಿಳಿದ ದಿನ ಹೆಲಿಕಾಪ್ಟರ್‌ನಲ್ಲಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಲು ನಿರ್ಧರಿಸಲಾಗಿತ್ತು. ಕಳಪೆ ಹವಾಮಾನ ಮತ್ತು ಗೋಚರತೆಯಿಂದಾಗಿ ಪ್ರಧಾನಿಯರು ವಾಯುಮಾರ್ಗಕ್ಕೆ ಬದಲಾಗಿ ರಸ್ತೆಯ ಮೂಲಕ ಪ್ರಯಾಣ ಬೆಳೆಸಿದ್ದರು. ಪಂಜಾಬ್ ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಖಚಿತಪಡಿಸಿದ ನಂತರ ಹೆಚ್ಚಿನ ಭದ್ರತೆಯ ಬೆಂಗಾವಲು ಪಡೆ ಹೊರಟಿತ್ತು.

ಆದರೆ, ಸ್ಮಾರಕಕ್ಕೆ ಸುಮಾರು 30 ಕಿಮೀ ಮೊದಲು, ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿದ್ದರಿಂದ ಬೆಂಗಾವಲು ಪಡೆ ಮೇಲ್ಸೇತುವೆಯಲ್ಲಿ ಸಿಲುಕಿಕೊಂಡಿತು. ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿಯವರಿದ್ದ ವಾಹನವು ಮೇಲ್ಸೆತುವೆ ಮೇಲೆಯೇ ಸಿಲುಕಿಕೊಂಡ ನಂತರ ಅವರ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಪ್ರಧಾನಿಯವರು ವಾಪಸ್ಸಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!