November 16, 2026
Monday, November 16, 2026
spot_img

ಮಳೆನೀರು ಕೊಯ್ಲು, ಜಲ ಸಂರಕ್ಷಣೆಗೆ ಆದ್ಯತೆ ನೀಡಿ: ರಾಜ್ಯಪಾಲೆ ಡಾ. ಸುಧಾ ಯಾದವ್

ಹೊಸದಿಗಂತ ವರದಿ ಚಿತ್ರದುರ್ಗ:

ಜಲ ಸಂರಕ್ಷಣೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಹಾಗೂ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕದ ರಾಜ್ಯಪಾಲೆ ಡಾ. ಸುಧಾ ಯಾದವ್ ಕರೆ ನೀಡಿದರು.

ಬಳ್ಳಾರಿಗೆ ಪ್ರಯಾಣಿಸುವ ಮಾರ್ಗಮಧ್ಯೆ ಭಾನುವಾರ ಹಿರಿಯೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಭೇಟಿಯಾಗಿ ಮಧ್ಯಾಹ್ನದ ಭೋಜನದೊಂದಿಗೆ ಸಂವಾದ ನಡೆಸಿದ ಅವರು, ಜಿಲ್ಲೆಯ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಶ್ಲಾಘಿಸಿದರು.

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಾವಯವ ಕೃಷಿ ಪದ್ಧತಿ ಹಾಗೂ ಹೈನುಗಾರಿಕೆಯಲ್ಲಿ ಜಿಲ್ಲೆಯ ರೈತರು ಸಾಧಿಸಿರುವ ಪ್ರಗತಿ ಸಂತಸದ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ನೀರಿನ ಅಭಾವ ಎದುರಾಗದಂತೆ ಮಳೆನೀರು ಸಂಗ್ರಹಣೆ ಮತ್ತು ಜಲ ಸಂರಕ್ಷಣಾ ಕ್ರಮಗಳನ್ನು ಈಗಿನಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ:

ಯುವ ಪೀಳಿಗೆಯು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ತಮ್ಮ ಅನುಭವ ಮತ್ತು ಪ್ರಭಾವವನ್ನು ಬಳಸಿಕೊಂಡು ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮಾರುಕಟ್ಟೆ, ರೈತ ಉತ್ಪಾದಕ ಕಂಪನಿಗಳು, ಸಮಗ್ರ ಕೃಷಿ, ಹೈನುಗಾರಿಕೆ, ಸಾವಯವ ಕೃಷಿ, ಸ್ವಸಹಾಯ ಸಂಘಗಳ ಮೂಲಕ ಸಿರಿಧಾನ್ಯ ಆಧಾರಿತ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ, ಕನ್ನಡ ಸಾಹಿತ್ಯ, ಗ್ರಾಮೀಣ ಕಲೆ, ರಂಗಭೂಮಿ ಹಾಗೂ ಮಳೆನೀರು ಕೊಯ್ಲು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ರಾಜ್ಯಪಾಲರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಾಧಕರು ತಮ್ಮ ಕಾರ್ಯಚಟುವಟಿಕೆಗಳು, ಅನುಭವಗಳು ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಜಾಗೃತಿ ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಸಾಧಕರು ತಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಬೇಕು ಎಂದು ರಾಜ್ಯಪಾಲರು ಪ್ರೋತ್ಸಾಹಿಸಿದರು.

ಸಂವಾದದಲ್ಲಿ ಹೊಸದುರ್ಗದ ಶ್ರೀರಾಂಪುರ ದುರ್ಗದ ಸಿರಿಧಾನ್ಯ ರೈತ ಉತ್ಪಾದಕ ಸಂಸ್ಥೆಯ ಗಿರೀಶ್, ಪ್ರಗತಿಪರ ರೈತರಾದ ಕೋನರೆಡ್ಡಿ, ಕೆ. ನರಸಿಂಹಮೂರ್ತಿ, ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಮಾರಾಟ ಪ್ರತಿನಿಧಿ ಶ್ರೀದೇವಿ, ಲೇಖಕ ಎಂ.ಜಿ. ರಂಗಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ 90 ವರ್ಷದ ಹಿರಿಯ ರಂಗಕರ್ಮಿ, ಹಾರ್ಮೋನಿಯಂ ವಾದಕ ಹಾಗೂ ನಾಟಕ ನಿರ್ದೇಶಕ ಜಿ.ಡಿ. ತಿಮ್ಮಯ್ಯ ಅವರನ್ನು ರಾಜ್ಯಪಾಲರಿಗೆ ಪರಿಚಯಿಸಲಾಯಿತು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿರುವುದರ ಜೊತೆಗೆ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ತಿಮ್ಮಯ್ಯ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದನ್ನು ತಿಳಿದು ರಾಜ್ಯಪಾಲರು ಸಂತಸ ವ್ಯಕ್ತಪಡಿಸಿದರು.

Must Read

Skip to toolbar