August 25, 2026
Tuesday, August 25, 2026
spot_img

ಪಿಎಸ್ಐ ವಿಡಿಯೋ ವೈರಲ್ ಬೆನ್ನಲ್ಲೇ ಹಿಂಡಲಗಾ ಜೈಲು ಅಧಿಕಾರಿಗಳಿಂದ ಖಾಸಗಿ ದೂರು: ಆರೋಪವೇನು?

ಹೊಸದಿಗಂತ ವರದಿ ಬೆಳಗಾವಿ:

ಮಹಿಳಾ ಪಿಎಸ್ಐಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿಡಿಯೋ ಪ್ರಸಾರ ಮಾಡುವ ವೇಳೆ ಹಿಂಡಲಗಾ ಕೇಂದ್ರ ಕಾರಾಗೃಹದ ಹೆಸರನ್ನು ಬಳಸಿಕೊಂಡು ಜೈಲಿನ ಘನತೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರು, ಜೈಲಿನ ಕುರಿತು ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಹಿಂಡಲಗಾ ಕೇಂದ್ರ ಕಾರಾಗೃಹದ ಘನತೆಗೆ ಚ್ಯುತಿ ಉಂಟುಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ನಾಗರಾಜ್ ಸೇರಿದಂತೆ ಕೆಲವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ. ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಮಹಾಂತೇಶ ಅವರ ಮೂಲಕ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಕೆಐಎಸ್‌ಎಫ್‌ನ ಮಹಿಳಾ ಪಿಎಸ್ಐಗೆ ಸಂಬಂಧಿಸಿದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಖಾಸಗಿ ವ್ಯಕ್ತಿಯೊಬ್ಬರಿಗೆ ಮಹಿಳಾ ಪಿಎಸ್ಐ ಬೆತ್ತಲಾಗಿ ವಿಡಿಯೋ ಕಾಲ್ ಮಾಡುತ್ತಿರುವ ದೃಶ್ಯಗಳು ಎಂದು ಹೇಳಲಾಗಿರುವ ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು.

ಈ ವಿಡಿಯೋವನ್ನು ‘Sandhya777nagraj’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ವಿಡಿಯೋ ಜತೆಗೆ ಮಾಡಲಾದ ಪೋಸ್ಟ್‌ನಲ್ಲಿ ಮಹಿಳಾ ಪಿಎಸ್ಐ ನಡೆಸಿದ ವಿಡಿಯೋ ಕಾಲ್ ಹಿಂಡಲಗಾ ಕೇಂದ್ರ ಕಾರಾಗೃಹದ ಆವರಣದಲ್ಲಿಯೇ ನಡೆದಿದೆ ಎಂಬ ರೀತಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜೈಲಿಗೂ ಪ್ರಕರಣಕ್ಕೂ ಸಂಬಂಧವಿಲ್ಲ: ಅಧಿಕಾರಿಗಳ ಸ್ಪಷ್ಟನೆ

ವಿಡಿಯೋ ಪ್ರಕರಣಕ್ಕೂ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಂಬಂಧಪಟ್ಟ ಮಹಿಳಾ ಪಿಎಸ್ಐಗೂ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೂ ಯಾವುದೇ ನಂಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಆದರೂ ಜೈಲಿನ ಹೆಸರನ್ನು ಬಳಸಿಕೊಂಡು ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವುದರಿಂದ ಕಾರಾಗೃಹದ ಪ್ರತಿಷ್ಠೆ ಹಾಗೂ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಜೈಲಿನಂತಹ ಸೂಕ್ಷ್ಮ ಸರ್ಕಾರಿ ಸಂಸ್ಥೆಯ ಕುರಿತು ಆಧಾರರಹಿತ ಮಾಹಿತಿ ಅಥವಾ ತಪ್ಪು ಆರೋಪಗಳನ್ನು ಹರಡುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೈದಿ ಸಾಯಿಕುಮಾರ್ ವಿರುದ್ಧವೂ ದೂರು

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ತುಮಕೂರು ಮೂಲದ ಕೈದಿ ಸಾಯಿಕುಮಾರ್ ವಿರುದ್ಧವೂ ದೂರು ನೀಡಲಾಗಿತ್ತು ಎಂದು ತಿಳಿದುಬಂದಿದೆ. ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

BNS ಅಡಿ ಕ್ರಮಕ್ಕೆ ಮನವಿ

ಜೈಲಿನ ಕುರಿತು ಸುಳ್ಳು, ಅವಹೇಳನಕಾರಿ ಹಾಗೂ ಜೈಲಿನ ಘನತೆಗೆ ಧಕ್ಕೆ ತರುವಂತಹ ಮಾಹಿತಿಯನ್ನು ಪ್ರಸಾರ ಮಾಡಿದ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ 356(2) ಮತ್ತು 356(3)ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಮಹಿಳಾ ಪಿಎಸ್ಐಗೆ ಸಂಬಂಧಿಸಿದ ವಿಡಿಯೋ ಪ್ರಕರಣದ ಸತ್ಯಾಸತ್ಯತೆ ಒಂದು ಕಡೆ ತನಿಖೆಯ ವಿಷಯವಾಗಿದ್ದರೆ, ಮತ್ತೊಂದೆಡೆ ವಿಡಿಯೋ ಪ್ರಸಾರದ ವೇಳೆ ಹಿಂಡಲಗಾ ಕೇಂದ್ರ ಕಾರಾಗೃಹದ ಹೆಸರನ್ನು ಬಳಸಲಾಗಿದೆ ಎಂಬ ಆರೋಪ ಹೊಸ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಖಾಸಗಿ ದೂರಿನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ಯಾವ ದಿಕ್ಕಿನಲ್ಲಿ ಸಾಗಲಿವೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !