ಹೊಸದಿಗಂತ ಡಿಜಿಟಲ್ ಡೆಸ್ಕ್ :
ಚಲಿಸುತ್ತಿದ್ದ ಖಾಸಗಿ ಶಾಲಾ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಘಟನೆ ನಡೆದಿದ್ದು, ಸಿರುಗುಪ್ಪದಿಂದ ತೆಕ್ಕಲಕೋಟೆಗೆ ತೆರಳುತ್ತಿದ್ದ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಸ್ಕೂಲ್ ಬಸ್ ಹೊತ್ತಿ ಉರಿದಿದೆ.
ಮೊದಲಿಗೆ ಡಿಸೇಲ್ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಇದನ್ನು ಗಮನಿಸಿ, ಡ್ರೈವರ್‌ಗೆ ಹೇಳಿದ್ದಾರೆ. ತಕ್ಷಣ ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಚಾಲಕ, ಎಲ್ಲ ಮಕ್ಕಳನ್ನು ಬಸ್‌ನಿಂದ ಕೆಳಗಿಳಿಸಿದ್ದಾನೆ.
ಮಕ್ಕಳು ಕೆಳಗೆ ಇಳಿಯುತ್ತಿದ್ದಂತೆ ಬಸ್ ಹೊತ್ತಿ ಉರಿದಿದೆ. ವಿದ್ಯಾರ್ಥಿಗಳು, ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸಿದ್ದಾರೆ. ಸದ್ಯ ಮಕ್ಕಳು ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಸಿರಗುಪ್ಪ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.