ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಧಾನದ ಅಂಗೀಕಾರದ 75ನೇ ವರ್ಷಾಚರಣೆಯ ವಿಶೇಷ ಚರ್ಚೆ ಇಂದು ಆರಂಭವಾಗಲಿದ್ದು, ಹೊಸದಾಗಿ ಆಯ್ಕೆಯಾಗಿರುವ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಲೋಕಸಭೆಯಲ್ಲಿ ಚರ್ಚೆಯ ವೇಳೆ ಚೊಚ್ಚಲ ಭಾಷಣ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚರ್ಚೆಗೆ ಚಾಲನೆ ನೀಡುವ ಸಾಧ್ಯತೆ ಇದೆ.
ಎರಡು ದಿನಗಳ ಚರ್ಚೆ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಬಿಜೆಪಿಯ 12 ಕ್ಕೂ ಹೆಚ್ಚು ನಾಯಕರು ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಡಿ.14ರಂದು ಸಂಜೆ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ, ಶ್ರೀಕಾಂತ್ ಶಿಂಧೆ, ಶಾಂಭವಿ ಚೌಧರಿ, ರಾಜ್‌ಕುಮಾರ್ ಸಂಗ್ವಾನ್, ಜಿತೇನ್ ರಾಮ್ ಮಾಂಝಿ, ಅನುಪ್ರಿಯಾ ಪಟೇಲ್ ಮತ್ತು ರಾಜೀವ್ ರಂಜನ್ ಸಿಂಗ್ ಸೇರಿದಂತೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ನಾಯಕರು ಮತ್ತು ಸದಸ್ಯರು ಚರ್ಚೆಯಲ್ಲಿ ಮಾತನಾಡುವ ಸಾಧ್ಯತೆಯಿದೆ.
ಡಿಎಂಕೆ ನಾಯಕರಾದ ಟಿಆರ್ ಬಾಲು ಮತ್ತು ಎ ರಾಜಾ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಮೊಹುವಾ ಮೊಯಿತ್ರಾ ಅವರು ಚರ್ಚೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.