ಸಕ್ಕರೆ ನಾಡಿನಲ್ಲಿ ಬಿಜೆಪಿ ಪರವಾದ ಅಲೆ: ಡಾ. ಪರಮೇಶ್

ಹೊಸದಿಗಂತ ವರದಿ, ಮಂಡ್ಯ :

ಜಿಲ್ಲೆಯಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರಮೋದಿ ಹಾಗೂ ಸರ್ಕಾರದ ಕಾರ‌್ಯವೈಖರಿಯನ್ನು ಮೆಚ್ಚಿ ಹಲವಾರು ಮಂದಿ ಬೇರೆ ಬೇರೆ ಪಕ್ಷದ ಕಾರ‌್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಮುಖಂಡ ಡಾ. ಪರಮೇಶ್ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರ ಪರವಾಗಿ ಒಳ್ಳೆಯ ಬೆಳವಣಿಗೆ ಇದೆ. ಅದು ಮತಗಳಾಗಿ ಪರಿವರ್ತನೆಯಾಗಲಿದೆ ಎಂದು ಹೇಳಿದರು.

ಈ ಹಿಂದೆ ಎಸ್.ಡಿ. ಜಯರಾಂ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಲವಾರು ಮಂದಿ ನಾಯಕರನ್ನು ಹುಟ್ಟುಹಾಕಿದ್ದಾರೆ. ಅವರ ಕಾರ‌್ಯವೈಖರಿ ಅಶೋಕ್ ಜಯರಾಂ ಅವರಿಗೆ ವರವಾಗಲಿದ್ದು, ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸೇರ್ಪಡೆ :
ಜಾತ್ಯತೀತ ಜನತಾದಳ ಹಾಗೂ ಕಾಂಗ್ರೆಸ್ ಮುಖಂಡರು ಬಿಜೆಪಿ ತತ್ವ-ಸಿದ್ಧಾಂತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಡಾ. ಪರಮೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಜಾ.ದಳ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ರಾಘವೇಂದ್ರ, ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ಟಿ. ಶಂಕರ್ ಹಾಗೂ ಕಾಂಗ್ರೆಸ್ ಮುಖಂಡರಾದ ಸುಮಾರಾಣಿ ಹಾಗೂ ಅವರ ಪುತ್ರ ಪ್ರಜ್ವಲ್ ಬಿಜೆಪಿ ಸೇರಿದರು.

ಈ ಸಂದರ್ಭ ಮಾತನಾಡಿದ ಸುಮಾರಾಣಿ ಅವರು, ಸುಮಾರು 35 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ಇಂದಿನ ಕಾಂಗ್ರೆಸ್ ಅಭ್ಯರ್ಥಿ ಪಿ. ರವಿಕುಮಾರ್ ಗೌಡ ಹಾಗೂ ಕಾಂಗ್ರೆಸ್ ನಾಯಕರು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇಲ್ಲಿಯವರೆಗೂ ನಮ್ಮನ್ನು ಭೇಟಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಕೆಲಸ ಮಾಡುವುದಾಗಿ ಹೇಳಿದರು.

ನಗರಸಭೆ ಮಾಜಿ ಸದಸ್ಯ ರಾಘವೇಂದ್ರ ಮಾತನಾಡಿ, ನನ್ನನ್ನೂ ಸಹ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಿಜೆಪಿಯ ತತ್ವ-ಸಿದ್ದಾಂತ ಹಾಗೂ ನರೇಂದ್ರ ಮೋದಿ ಅವರ ಕಾರ‌್ಯವೈಖರಿಯನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಂ.ಪಿ. ಅರುಣ್ ಕುಮಾರ್, ಮಾಜಿ ಸದಸ್ಯ ಕೆ.ಎಲ್. ನಾಗೇಂದ್ರ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!