ಹೊಸದಿಗಂತ ವರದಿ,ಬೆಂಗಳೂರು:
ವಿಧಾನ ಸೌಧ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೂ ಬುಧವಾರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆ ಇಬ್ಬರಿಗೆ ನ್ಯಾಯಾಂಗ ಬಂಧನ ಮತ್ತು ಒಬ್ಬನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ವಿಧಾನಸೌಧ ಠಾಣೆ ಪೊಲೀಸರು ಬುಧವಾರ ೩೯ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಬಂತ ಮೂವರ ಪೈಕಿ ಆರ್.ಟಿ.ನಗರದ ಮುನಾವರ್ ಮತ್ತು ದಿಲ್ಲಿ ಮೂಲದ ಮೊಹಮ್ಮದ್ ಇಲ್ತಾಜ್‌ಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಮತ್ತೊಂದೆಡೆ ಇನ್ನೊಬ್ಬ ಆರೋಪಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿ ಎಂಬ ಆರೋಪಿಗೆ 1 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇದೇ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಪಾಕ್ ಪ್ರೇಮಿಗಳು ಭಾರತ ದೇಶದಲ್ಲಿ ಇರಬಾರದು. ಅಂತವರನ್ನು ಸರ್ಕಾರ ಕೂಡಲೇ ಗಡಿಪಾರು ಮಾಡಬೇಕೆಂದು ನ್ಯಾಯವಾದಿಗಳು ಆಗ್ರಹಿಸಿದರು ಎಂದು ವಕೀಲರೊಬ್ಬರು ಅಸಮಧಾನ ವ್ಯಕ್ತಪಡಿಸಿದರು.
ಏನಿದು ಘಟನೆ?:
ಫೆ. ೨೭ರಂದು ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಪರ ಬೆಂಬಲಿಗರು ವಿಧಾನಸೌಧ ಆವರಣದಲ್ಲಿ ಜೈಕಾರ ಕೂಗಿವ ವೇಳೆ ಈ ಮೂವರು ಆರೋಪಿಗಳು ನಾಸೀರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಜತೆಗೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು. ಮಾಧ್ಯಮಗಳಲ್ಲಿ ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಡಿಯೋ ಸ್ಯಾಂಪಲ್‌ನ್ನು ವಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕ್ಕೆ ಕಳುಹಿಸಲಾಗಿತ್ತು. ವಿಧಾನಸೌಧ ದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಡಿಯೋ ಬಗ್ಗೆ ಖಾಸಗಿ ವಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಬಹಿರಂಗವಾಗುತ್ತಿದ್ದಂತೆ, ಸರ್ಕಾರಿ ಎಫ್‌ಎಸ್‌ಎಲ್ ವರದಿಯಲ್ಲಿಯೂ ದೃಢಪಡುವ ಸಾಧ್ಯತೆಯಿರುವುದರಿಂದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.