ಪುರಾಣ ಪ್ರಸಿದ್ಧ ಭದ್ರಕಾಳಿ‌ ಬನ ಜಾತ್ರಾ ಉತ್ಸವಕ್ಕೆ ನಂದಿಧ್ವಜ ಪೂಜೆಯೊಂದಿಗೆ ಚಾಲನೆ

ಹೊಸದಿಗಂತ, ಬೇಲೂರು :

ಬೇಲೂರು ತಾಲ್ಲೂಕಿನ ಗಡಿರೇಖೆಯಲ್ಲಿನ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಭದ್ರಕಾಳಿ ಬನ ಶ್ರೀ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಪುಷ್ಪಗಿರಿ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಭದ್ರಕಾಳಿ‌ ಬನ ಟ್ರಸ್ಟ್ ಅಧ್ಯಕ್ಷ ಹುಲ್ಲೇನಹಳ್ಳಿ ಸಿದ್ದುರಾಜು, ಮಾಜಿ‌ ಸಚಿವ ಸಿ.ಟಿ.ರವಿ ಸೇರಿದಂತೆ ಹತ್ತಾರು ಗಣ್ಯರು ಚಾಲನೆ ನೀಡಿದರು.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿರೇಖೆಯಲ್ಲಿ ಬರುವ ಸುಂದರ ರಮ್ಯತಾಣ ಭದ್ರಕಾಳಿ ಬನ ಶ್ರೀ ವೀರಭದ್ರೇಶ್ವರಸ್ವಾಮಿಗೆ ಪ್ರತಿ ವರ್ಷ ಹೊಳಿ ಹುಣ್ಣುಮೆ ದಿನ ದಿವ್ಯ ರಥೋತ್ಸವ, ಕೆಂಡೋತ್ಸವ ಮತ್ತು ಬೃಹತ್ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ 26 ವರ್ಷದಿಂದ ನಡೆದುಕೊಂಡು ಬಂದಿದೆ.

ಸದ್ಯ ಪ್ರಸಕ್ತ ವರ್ಷದ 27 ನೇ ಜಾತ್ರಾ ಮಹೋತ್ಸವ ಚಾಲನೆ ಮುನ್ನ ಹುಲ್ಲೇನಹಳ್ಳಿ, ಗಾಳಿಹಳ್ಳಿ, ಅಣ್ಣಿಂದಡಿಕೆ ಇನ್ನೂ ಮುಂತಾದ ಗ್ರಾಮಸ್ಥರು ಬೈಕ್ ಜಾಥ ಮೂಲಕ ಪುಷ್ಪಗಿರಿ ಜಗದ್ಗುರುಗಳನ್ನು ಹಳೇಬೀಡು, ಮಯಗೊಂಡನಹಳ್ಳಿ, ಕರಿಕಟ್ಟೆಹಳ್ಳಿ, ರಾಜಶಿರಿಯೂರು, ಈಶ್ಚರಹಳ್ಳಿ, ಕಳಾಸಪುರ,ಗಾಳಿಹಳ್ಳಿ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಜಯಘೋಷದೊಂದಿಗೆ ಭದ್ರಕಾಳಿ ಬನಕ್ಕೆ ಬರಮಾಡಿಕೊಂಡರು.

ಬಳಿಕ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಭಕ್ತರು ಪೂಜ್ಯರನ್ನು ಆರತಿ ಮೂಲಕ ಆಹ್ವಾನಿಸಿದರು. ಪೂಜ್ಯ ಜಗದ್ಗುರುಗಳು ದೇಗುಲ ಮುಂದಿನ ನಂದಿಧ್ಬಜಕ್ಕೆ ಪೂಜೆಸಿ. ಧ್ವಜಾರೋಹಣ ನಡೆಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ತರುವಾಯ ದೇಗುಲ ಗರ್ಭಗಡಿಯಲ್ಲಿ ಶ್ರೀ ವೀರಭದ್ರೇಶ್ವರನಿಗೆ ಅಷ್ಟೋತ್ತರ, ಸಹಸ್ರ ಬಿಲ್ವಪತ್ರೆ ಅಭಿಷೇಕವನ್ನು ನಡೆಸಿ ಮಹಾಮಂಗಳಾರತಿ ಮೂಲಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಪುಷ್ಪಗಿರಿ ಜಗದ್ಗುರುಗಳು, ತಾಲ್ಲೂಕಿನ ಗಡಿರೇಖೆಯಲ್ಲಿ ಭದ್ರಕಾಳಿ‌ ಬನ ಎರಡು ಜಿಲ್ಲೆಯಲ್ಲಿಯೇ ಪ್ರಕೃತಿ ಸೌಂದರ್ಯದ ರಮ್ಯ ತಾಣವಾಗಿದೆ. ಐದು ಬೆಟ್ಟದ ನಡುವಿನ ಈ ಸುಂದರ ವಾತಾವರಣವನ್ನು ಜನತೆ ಇಲ್ಲಿಗೆ ಬಂದು ನೆಮ್ಮದಿಯ ಪಡೆಯುವ ಅಗನ್ಯ ತಾಣವಾಗಿದೆ ಎಂದ ಅವರು ಕಳೆದ 26 ವರ್ಷದಿಂದ ಇಲ್ಲಿನ ಭದ್ರಕಾಳಿ‌ ಬನ ಟ್ರಸ್ಟ್ ಅಧ್ಯಕ್ಷರಾದ ಹುಲ್ಲೇನಹಳ್ಳಿ ಸಿದ್ದುರಾಜು ಮತ್ತು ಪದಾಧಿಕಾರಿಗಳು ಕಾರ್ಯಕ್ಷಮತೆ ‌ನಿಜಕ್ಕೂ ಅನನ್ಯವಾಗಿದೆ. ಸುಮಾರು ಸಾವಿರ ವರ್ಷದ ಗತ ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇಗುಲ ಶಿಥಿಲವಾದ ಸಂದರ್ಭದಲ್ಲಿ ದಿ.ಬಿ.ಶಿವರುದ್ರಪ್ಪನವರು ಸುತ್ತ ಮುತ್ತಲ ಗ್ರಾಮಸ್ಥರ ಸಹಕಾರದಿಂದ ದೇಗುಲ ಜೀರ್ಣೋದ್ಧಾರ ಮಾಡಿದ್ದು ಸದ್ಯ 26 ವರ್ಷ ಕಳೆದಿದೆ.ಬರುವ ಭಕ್ತರು ಎರಡು ದಿನಗಳ ಕಾಲ ನಡೆಯುವ ದಾಸೋಹ , ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸಿ ಎಂದು ಕರೆ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!