ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಕರ್ನಾಟಕದ ಪ್ರೊ. ಯಜ್ಞೇಶ್ವರ ಶಾಸ್ತ್ರಿ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಸಗುಳಿಯ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಮಧ್ಯಪ್ರದೇಶ ಸರಕಾರವು ಮುಂದಿನ 3 ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ ಇದರ ಕುಲಾಧಿಪತಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರೂ, ಶಿಕ್ಷಣ ತಜ್ಞರೂ ಆಗಿರುವ ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು.

ಅವರು ಪ್ರಸ್ತುತ ಮಧ್ಯಪ್ರದೇಶ ಸರಕಾರದ ಸಂಸ್ಕೃತಿ ಸಚಿವಾಲಯದ ಆಚಾರ್ಯ ಶಂಕರ ಸಾಂಸ್ಕೃತಿಕ ಏಕ್ತಾ ನ್ಯಾಸಸ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಅಪ್ರತಿಮ ಕೆಲಸದ ಮೂಲಕ ಜನಮನ್ನಣೆ ಗಳಿಸಿದ್ದಾರೆ.

ಪ್ರೊ. ಯಜ್ಞೇಶ್ವರ ಶಾಸ್ತ್ರಿ ಅವರು ಭಾರತೀಯ ತತ್ವಶಾಸ್ತ್ರ, ವಿಶೇಷವಾಗಿ ಹಿಂದೂ, ಬೌದ್ಧ ಮತ್ತು ಜೈನ ಫಿಲಾಸಫಿಗಳ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. ಸಂಸ್ಕೃತ ಮತ್ತು ಭಾರತೀಯ ರಿಲಿಜನ್ ವಿಷಯಗಳಿಗೆ ಸಂಬಂಧಿಸಿಯೂ ತಮ್ಮ ಸಂಶೋಧನೆಗಳು ಮತ್ತು ಉಪನ್ಯಾಸಗಳಿಗಾಗಿ ಖ್ಯಾತರಾಗಿದ್ದಾರೆ.

ಅವರು ಗುಜರಾತ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕ, ಪ್ರೊಫೆಸರ್, ಅಧ್ಯಕ್ಷರೂ ಆಗಿ ಸುಮಾರು 40 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಅದಲ್ಲದೇ, ಐಸಿಸಿಆರ್, ಐಸಿಪಿಆರ್ ಗಳ ನ್ಯಾಶನಲ್ ಫೆಲೊ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಸದ್ಯ ನ್ಯೂಜಿರ್ಲೆಂಡ್​ನಲ್ಲಿ ತಮ್ಮ ಮಗನೊಂದಿಗೆ ವಾಸಿಸುತ್ತಿರುವ ಪ್ರೊ. ಶಾಸ್ತ್ರಿಗಳು ಮುಂದಿನ ಮೂರು ವರ್ಷಗಳಕಾಲ ಭೋಪಾಲದ ಸಮೀಪವಿರುವ ಸಾಂಚಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!